ADVERTISEMENT

ಕೋವಿಡ್‌ ಹೆಚ್ಚಳಕ್ಕೆ ನಲುಗಿದ ಷೇರುಪೇಟೆ: ನಿಫ್ಟಿ 524 ಅಂಶ ಇಳಿಕೆ

ಪಿಟಿಐ
Published 12 ಏಪ್ರಿಲ್ 2021, 15:04 IST
Last Updated 12 ಏಪ್ರಿಲ್ 2021, 15:04 IST
   

ಮುಂಬೈ: ಕೋವಿಡ್‌–19 ಪ್ರಕರಣಗಳ ಸಂಖ್ಯೆಯು ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರುವುದು ಹೂಡಿಕೆದಾರರನ್ನು ಆತಂಕಕ್ಕೆ ದೂಡಿತು. ಷೇರುಪೇಟೆಗಳಲ್ಲಿ ಸೋಮವಾರ ಅತಿಯಾದ ಮಾರಾಟದ ಒತ್ತಡ ಕಂಡುಬಂದಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 1,708 ಅಂಶ ಕುಸಿತ ಕಂಡು 47,884 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು. ಫೆಬ್ರುವರಿ 26ರ ನಂತರ ದಿನದ ವಹಿವಾಟಿನಲ್ಲಿ ಆಗಿರುವ ಗರಿಷ್ಠ ಕುಸಿತ ಇದಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 524 ಅಂಶ ಇಳಿಕೆ ಕಂಡು 14,311 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಬಿಎಸ್‌ಇನಲ್ಲಿ ಡಾ ರೆಡ್ಡೀಸ್‌ ಹೊರತುಪಡಿಸಿ ಉಳಿದೆಲ್ಲ ಕಂಪನಿಗಳ ಷೇರು ಮೌಲ್ಯ ಇಳಿಕೆ ಕಂಡಿದೆ.

ಕರಗಿತು ₹ 8.77 ಲಕ್ಷ ಕೋಟಿ: ದಿನದ ವಹಿವಾಟಿನಲ್ಲಿ ಸೂಚ್ಯಂಕವು ಭಾರಿ ಕುಸಿತ ಕಂಡಿದ್ದರಿಂದ ಹೂಡಿಕೆದಾರರ ಸಂಪತ್ತು ಮೌಲ್ಯ ₹ 8.77 ಲಕ್ಷ ಕೋಟಿಯಷ್ಟು ಕರಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 200.85 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ADVERTISEMENT

ಸ್ಥಳೀಯವಾಗಿ ಅಲ್ಲಲ್ಲಿ ಲಾಕ್‌ಡೌನ್‌ ಜಾರಿಯಾಗುತ್ತಿರುವುದು ಹಾಗೂ ಕೋವಿಡ್‌ ಪ್ರಕರಣಗಳು ದಾಖಲೆ ಮಟ್ಟಕ್ಕೆ ಏರಿಕೆ ಆಗಿರುವುದು ಷೇರುಪೇಟೆ ವಹಿವಾಟನ್ನು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿಯುವಂತೆ ಮಾಡಿದೆ ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಹೂಡಿಕೆದಾರರು ಕಾರ್ಪೊರೇಟ್‌ ಗಳಿಕೆ ಮತ್ತು ಆರ್ಥಿಕ ಬೆಳವಣಿಗೆಯ ಅಂಕಿ–ಅಂಶಗಳ ಬಿಡುಗಡೆಯನ್ನು ಎದುರು ನೋಡುತ್ತಿರುವುದರಿಂದ ಜಾಗತಿಕ ಮಾರುಕಟ್ಟೆಗಳು ದಾಖಲೆಯ ಗರಿಷ್ಠ ಮಟ್ಟದಿಂದ ಕೆಳಗಿಳಿದವು.

ರೂಪಾಯಿ ಮೌಲ್ಯ ಇಳಿಕೆ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 32 ಪೈಸೆ ಇಳಿಕೆ ಆಗಿ ಒಂದು ಡಾಲರ್‌ಗೆ ₹ 75.05ಕ್ಕೆ ತಲುಪಿದೆ. ಇದು ಒಂಭತ್ತು ತಿಂಗಳ ಕನಿಷ್ಠ ಆಗಿದೆ. ಆರು ದಿನಗಳ ವಹಿವಾಟು ಅವಧಿಗಳಲ್ಲಿ ದೇಶಿ ಕರೆನ್ಸಿಯ ಮೌಲ್ಯವು ಅಮೆರಿಕದ ಡಾಲರ್ ಎದುರು 193 ಪೈಸೆಗಳಷ್ಟು ಇಳಿಕೆ ಕಂಡಿದೆ.

ಕಚ್ಚಾ ತೈಲ ದರ ಏರಿಕೆ, ವಿದೇಶಿ ಬಂಡವಾಳ ಹಿಂತೆಗೆತ ಮತ್ತು ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯ ಕಾರಣಗಳಿಂದಾಗಿ ದೇಶಿ ಕರೆನ್ಸಿ ಮೌಲ್ಯ ಇಳಿಕೆ ಆಗಿದೆ ಎಂದು ತಜ್ಞರು ಹೇಳಿದ್ದಾರೆ.

ಕೈಗಾರಿಕೆ, ತಯಾರಿಕಾ ವಲಯಗಳ ಬೆಳವಣಿಗೆ, ಹಣದುಬ್ಬರ ಮತ್ತು ವ್ಯಾಪಾರ ಕೊರತೆ ಅಂತರದ ಅಂಕಿ–ಅಂಶಗಳನ್ನು ಹೂಡಿಕೆದಾರರು ಎದುರು ನೋಡುತ್ತಿದ್ದಾರೆ. ಹೀಗಾಗಿ ಈ ವಾರ ರೂಪಾಯಿ ಮೌಲ್ಯ ಇನ್ನಷ್ಟು ಇಳಿಕೆ ಕಾಣುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ.

ಮುಖ್ಯಾಂಶಗಳು

ಬಿಎಸ್‌ಇ ಮಿಡ್‌, ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 5.32ರವರೆಗೂ ಇಳಿಕೆ

ಇಂಡಸ್‌ಇಂಡ್‌ ಬ್ಯಾಂಕ್‌ ಷೇರು ಶೇ 8.60ರಷ್ಟು ಗರಿಷ್ಠ ಇಳಿಕೆ

ಬ್ರೆಂಟ್‌ ತೈಲ ದರ ಶೇ 0.56ರಷ್ಟು ಏರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.