ADVERTISEMENT

ಲಾಭಗಳಿಕೆ ವಹಿವಾಟು: ಸೆನ್ಸೆಕ್ಸ್‌, ನಿಫ್ಟಿ ಇಳಿಕೆ

ಪಿಟಿಐ
Published 17 ನವೆಂಬರ್ 2021, 16:03 IST
Last Updated 17 ನವೆಂಬರ್ 2021, 16:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಬ್ಯಾಂಕಿಂಗ್‌, ತೈಲ ಮತ್ತು ಅನಿಲ ಹಾಗೂ ಔಷಧ ವಲಯದ ಕಂಪನಿಗಳ ಷೇರುಗಳು ಬುಧವಾರದ ವಹಿವಾಟಿನಲ್ಲಿ ಲಾಭ ಗಳಿಕೆಗೆ ಒಳಗಾದವು. ಇದರಿಂದಾಗಿ ಷೇರುಪೇಟೆಗಳ ವಹಿವಾಟು ಎರಡನೇ ದಿನವೂ ಇಳಿಕೆ ಕಾಣುವಂತಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 314 ಅಂಶ ಇಳಿಕೆ ಕಂಡು 60,008ಕ್ಕೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 101 ಅಂಶ ಇಳಿಕೆ ಆಗಿ 17,898 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ಬಿಎಸ್ಇಯಲ್ಲಿ ದಿನದ ವಹಿವಾಟಿನಲ್ಲಿ ಎಕ್ಸಿಸ್‌ ಬ್ಯಾಂಕ್‌ ಷೇರು ಹೆಚ್ಚಿನ ನಷ್ಟ ಕಂಡಿತು. ಬ್ಯಾಂಕ್‌ ಷೇರು ಮೌಲ್ಯವು ಶೇಕಡ 2ರಷ್ಟು ಇಳಿಕೆ ಆಯಿತು. ರಿಲಯನ್ಸ್‌ ಇಂಡಸ್ಟ್ರೀಸ್ ಷೇರು ಮೌಲ್ಯ ಶೇ 1.91ರಷ್ಟು, ಕೋಟಕ್‌ ಬ್ಯಾಂಕ್ ಷೇರು ಮೌಲ್ಯ ಶೇ 1.51ರಷ್ಟು ಮತ್ತು ಭಾರ್ತಿ ಏರ್‌ಟೆಲ್‌ ಷೇರು ಮೌಲ್ಯ ಶೇ 1.39ರಷ್ಟು ಇಳಿಕೆ ಕಂಡಿದೆ.

ADVERTISEMENT

ಇಂಗ್ಲೆಂಡ್‌ನ ವಾರ್ಷಿಕ ಹಣದುಬ್ಬರ ದರವು ಅಕ್ಟೋಬರ್‌ನಲ್ಲಿ ಶೇ 3.1ರಿಂದ ಶೇ 4.2ಕ್ಕೆ ಏರಿಕೆ ಕಂಡಿದೆ. ಇದು ಜಾಗತಿಕ ಮಟ್ಟದಲ್ಲಿ ಹಣದುಬ್ಬರದ ಬಗ್ಗೆ ಹೂಡಿಕೆದಾರರ ಆತಂಕಕ್ಕೆ ಕಾರಣವಾಯಿತು ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವಿಸಸ್‌ನ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಮಿಡ್‌ ಕ್ಯಾಪ್‌ ಸೂಚ್ಯಂಕ ಶೇ 0.21ರಷ್ಟು ಇಳಿಕೆ ಕಂಡಿತು. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ 9 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 74.28ರಂತೆ ವಿನಿಮಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.