ADVERTISEMENT

ಲಾಭ ಗಳಿಕೆ ಒತ್ತಡ: 6 ದಿನಗಳ ಗೂಳಿ ಓಟಕ್ಕೆ ತಡೆ

ಪಿಟಿಐ
Published 25 ಜುಲೈ 2022, 13:39 IST
Last Updated 25 ಜುಲೈ 2022, 13:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಆರು ದಿನಗಳಿಂದ ನಡೆದಿದ್ದ ಸಕಾರಾತ್ಮಕ ಓಟಕ್ಕೆ ಸೋಮವಾರ ತಡೆ ಬಿದ್ದಿದೆ. ಹೂಡಿಕೆದಾರರು ತೈಲ ಮತ್ತು ಅನಿಲ, ವಾಹನೋದ್ಯಮ ಮತ್ತು ದೂರಸಂಪರ್ಕ ವಲಯದ ಷೇರುಗಳಿಂದ ಲಾಭಗಳಿಸಿಕೊಳ್ಳಲು ಮುಂದಾಗಿದ್ದರಿಂದ ಸೂಚ್ಯಂಕಗಳು ಇಳಿಕೆ ಕಾಣುವಂತಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 306 ಅಂಶ ಇಳಿಕೆ ಕಂಡು 55,766 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 88 ಅಂಶ ಇಳಿಕೆಯಾಗಿ 16,631 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ಸೆನ್ಸೆಕ್ಸ್‌ನಲ್ಲಿ ಮಹೀಂದ್ರ ಆ್ಯಂಡ್‌ ಮಹೀಂದ್ರ ಷೇರು ಮೌಲ್ಯ ಶೇ 3.80ರಷ್ಟು ಗರಿಷ್ಠ ಇಳಿಕೆ ಕಂಡಿತು. ಬಿಎಸ್‌ಇನಲ್ಲಿ ವಲಯವಾರು ವಾಹನ ಶೇ 1.68ರಷ್ಟು, ಇಂಧನ ಶೇ 1.32ರಷ್ಟು, ದೂರಸಂಪರ್ಕ (ಶೇ 0.96), ತೈಲ ಮತ್ತು ಅನಿಲ (ಶೇ 0.86) ಸೇರಿದಂತೆ ಪ್ರಮುಖ ವಲಯಗಳ ಸೂಚ್ಯಂಕಗಳು ಇಳಿಕೆ ಕಂಡವು.

ADVERTISEMENT

‘ಜಾಗತಿಕ ಆರ್ಥಿಕ ಹಿಂಜರಿತದ ಆತಂಕದ ಜೊತೆಗೆ ಷೇರು ಮಾರುಕಟ್ಟೆಗಳು ಕೆಲವು ಕಂಪನಿಗಳ ತ್ರೈಮಾಸಿಕ ಫಲಿತಾಂಶಕ್ಕೆ ಪ್ರತಿಕ್ರಿಯೆ ನೀಡಿವೆ. ಹೀಗಾಗಿ, ದೇಶಿ ಷೇರುಪೇಟೆ ಸೂಚ್ಯಂಕಗಳು ಸೋಮವಾರ ಇಳಿಕೆ ಕಂಡವು’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 1.24ರಷ್ಟು ಏರಿಕೆ ಆಗಿ ಒಂದು ಬ್ಯಾರಲ್‌ಗೆ 104.52 ಡಾಲರ್‌ಗೆ ತಲುಪಿತು.

ರಿಲಯನ್ಸ್ ಷೇರು ಮೌಲ್ಯ ಇಳಿಕೆ: ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯ ಜೂನ್‌ ತ್ರೈಮಾಸಿಕದ ಫಲಿತಾಂಶವು ಹೂಡಿಕೆದಾರರನ್ನು ಉತ್ತೇಜಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಸೋಮವಾರದ ವಹಿವಾಟಿನಲ್ಲಿ ಕಂಪನಿಯ ಷೇರು ಮೌಲ್ಯವು ಶೇ 3ಕ್ಕೂ ಹೆಚ್ಚು ನಷ್ಟ ಕಂಡಿತು.

ಬಿಎಸ್ಇನಲ್ಲಿ ಕಂಪನಿ ಷೇರು ಶೇ 3.31ರಷ್ಟು ಇಳಿಕೆ ಆಗಿ ಪ್ರತಿ ಷೇರಿನ ಬೆಲೆ ₹ 2,420ಕ್ಕೆ ತಲುಪಿತು. ಎನ್‌ಎಸ್‌ಇನಲ್ಲಿ ಶೇ 3.42ರಷ್ಟು ಇಳಿಕೆ ಆಗಿ ₹ 2,417ಕ್ಕೆ ತಲುಪಿತು.

ಕಂಪನಿಯ ಮಾರುಕಟ್ಟೆ ಮೌಲ್ಯದಲ್ಲಿ ₹ 55,981 ಕೋಟಿ ಕರಗಿದ್ದು, ಒಟ್ಟಾರೆ ಮೌಲ್ಯವು ₹ 16.37 ಲಕ್ಷ ಕೋಟಿಗೆ ಇಳಿಕೆ ಕಂಡಿತು.

‘ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯ ಜೂನ್‌ ತ್ರೈಮಾಸಿಕದ ಫಲಿತಾಂಶವು ದೂರಸಂಪರ್ಕ ಮತ್ತು ರಿಟೇಲ್‌ ದೃಷ್ಟಿಯಿಂದ ಉತ್ತಮವಾಗಿದೆ. ಆದರೆ, ತೈಲ ಸಂಸ್ಕರಣೆ ವಿಭಾಗದಲ್ಲಿ ಮಾರುಕಟ್ಟೆ ನಿರೀಕ್ಷೆಗಿಂತಲೂ ತುಸು ಕಡಿಮೆ ಆಗಿದೆ’ ಎಂದು ವಿನೋದ್‌ ನಾಯರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.