ADVERTISEMENT

ಷೇರುಪೇಟೆಗಳಲ್ಲಿ ಸತತ ಮೂರನೇ ದಿನವೂ ಸಕಾರಾತ್ಮಕ ವಹಿವಾಟು

ಹೂಡಿಕೆ ಉತ್ಸಾಹ: ಗೂಳಿ ಓಟ

ಪಿಟಿಐ
Published 5 ಫೆಬ್ರುವರಿ 2020, 16:49 IST
Last Updated 5 ಫೆಬ್ರುವರಿ 2020, 16:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಹೂಡಿಕೆದಾರರು ಅತ್ಯಂತ ಉತ್ಸಾಹದಿಂದ ವಹಿವಾಟಿನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರಿಂದಾಗಿ ಷೇರುಪೇಟೆಗಳಲ್ಲಿ ಸತತ ಮೂರನೇ ದಿನವೂ ಗೂಳಿ ಓಟ ಮುಂದುವರಿಯಿತು.

ಚೀನಾದ ಕೊರೊನಾ ವೈರಸ್‌ ನಿಯಂತ್ರಿಸಲು ಕೈಗೊಳ್ಳುತ್ತಿರುವ ಕ್ರಮಗಳು ಜಾಗತಿಕ ಹೂಡಿಕೆದಾರರನ್ನು ಮತ್ತೆ ಷೇರುಪೇಟೆಯತ್ತ ಬರುವಂತೆ ಮಾಡಿದೆ. ತಯಾರಿಕಾ ವಲಯದ ಚಟುವಟಿಕೆ ಜನವರಿಯಲ್ಲಿ ಏಳು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿರುವುದು ದೇಶಿ ಹೂಡಿಕೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 353 ಅಂಶ ಹೆಚ್ಚಾಗಿ 41,142 ಅಂಶಗಳಿಗೆ ತಲುಪಿತು. ಮಧ್ಯಂತರ ವಹಿವಾಟಿನಲ್ಲಿ 41,154 ಅಂಶಗಳಿಗೆ ತಲುಪಿತ್ತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 110 ಅಂಶ ಹೆಚ್ಚಾಗಿ 12 ಸಾವಿರದ ಗಡಿ ದಾಟಿತು.

ಗರಿಷ್ಠ ಗಳಿಕೆ: ಟಾಟಾ ಸ್ಟೀಲ್‌ ಷೇರು ಶೇ 5.14ರಷ್ಟು ಗರಿಷ್ಠ ಏರಿಕೆ ಕಂಡಿತು. ಭಾರ್ತಿ ಏರ್‌ಟೆಲ್‌, ಎಚ್‌ಡಿಎಫ್‌ಸಿ, ಟಿಸಿಎಸ್‌, ಎಲ್ಆ್ಯಂಡ್‌ಟಿ, ಎಸ್‌ಬಿಐ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳು ಗಳಿಕೆ ಕಂಡುಕೊಂಡಿವೆ.

ಸಂಪತ್ತು ₹ 1.57 ಲಕ್ಷ ಕೋಟಿ ಹೆಚ್ಚಳ‌

ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹ 1.57 ಲಕ್ಷ ಕೋಟಿಗಳಷ್ಟು ವೃದ್ಧಿಯಾಗಿದ್ದು, ಷೇರುಪೇಟೆಯ ಬಂಡವಾಳ ಮೌಲ್ಯ₹156.61 ಲಕ್ಷ ಕೋಟಿಗಳಿಂದ ₹ 158.18 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ. ಮೂರು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತಿನಲ್ಲಿ ₹ 5.14 ಲಕ್ಷ ಕೋಟಿಗಳಷ್ಟು ಏರಿಕೆ ಕಂಡುಬಂದಿದೆ.

ವಿಪ್ರೊ ಸ್ಥಾನ ಇಳಿಕೆ

ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ವಿಪ್ರೊ ಕಂಪನಿಯು ಬುಧವಾರ 21ನೇ ಸ್ಥಾನಕ್ಕೆ ಇಳಿಕೆ ಕಂಡಿದೆ. ಡಿ–ಮಾರ್ಟ್‌ ಸೂಪರ್‌ಮಾರ್ಕೆಟ್‌ ವಹಿವಾಟು ನಡೆಸುತ್ತಿರುವ ಅವೆನ್ಯು ಸೂಪರ್‌ಮಾರ್ಟ್‌ ಕಂಪನಿ 20ನೇ ಸ್ಥಾನಕ್ಕೇರಿದೆ.

ಬುಧವಾರದ ವಹಿವಾಟಿನ ಅಂತ್ಯಕ್ಕೆ ವಿಪ್ರೊ ಮಾರುಕಟ್ಟೆ ಮೌಲ್ಯ₹ 1,38,428 ಕೋಟಿಗಳಷ್ಟಾಗಿದೆ. ಆದರೆ, ಅವೆನ್ಯು ಸೂಪರ್‌
ಮಾರ್ಟ್ಸ್‌ನ ಮಾರುಕಟ್ಟೆ ಮೌಲ್ಯದಲ್ಲಿ ₹ 2,777 ಕೋಟಿ ಹೆಚ್ಚಾಗಿ₹ 1,41,205 ಕೋಟಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.