ADVERTISEMENT

ಸಂವೇದಿ ಸೂಚ್ಯಂಕ ಇಳಿಕೆ

ಕಚ್ಚಾ ತೈಲ ದರ ಏರಿಕೆ ಪರಿಣಾಮ

ಪಿಟಿಐ
Published 22 ಅಕ್ಟೋಬರ್ 2018, 20:01 IST
Last Updated 22 ಅಕ್ಟೋಬರ್ 2018, 20:01 IST
   

ಮುಂಬೈ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಕಂಡಿದೆ. ಹೀಗಾಗಿ ಷೇರುಪೇಟೆಗಳಲ್ಲಿ ಸೋಮವಾರ ನಕಾರಾತ್ಮಕ ವಹಿವಾಟು ನಡೆಯಿತು.

ಬ್ರೆಂಟ್‌ ಕಚ್ಚಾ ತೈಲ ದರ ಸೋಮವಾರ ಒಂದು ಬ್ಯಾರೆಲ್‌ಗೆ80.14 ಡಾಲರ್‌ಗೆ ಏರಿಕೆಯಾಗಿದೆ. ವಿದೇಶಿ ಸಾಂಸ್ಥಿಕ ಬಂಡವಾಳ ಹೊರಹರಿವು ಸಹ ಸೂಚ್ಯಂಕವನ್ನು ಇಳಿಕೆ ಕಾಣುವಂತೆ ಮಾಡಿತು.

ಎನ್‌ಬಿಎಫ್‌ಸಿಗಳ ನಗದು ಲಭ್ಯತೆ ಬಗ್ಗೆ ಹೂಡಿಕೆದಾರರು ಆತಂಕ ವ್ಯಕ್ತಪಡಿಸಿದ್ದು, ಮಾರಾಟಕ್ಕೆ ಹೆಚ್ಚು ಗಮನ ನೀಡಿದರು. ಇದರಿಂದ ವಹಿವಾಟು ಇಳಿಕೆ ಕಂಡಿದೆ ಎಂದು ತಜ್ಞರು ಹೇಳಿದ್ದಾರೆ.

ADVERTISEMENT

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 34,689 ಅಂಶಗಳಲ್ಲಿ ವಹಿವಾಟು ಆರಂಭಿಸಿತು. 34,748 ಅಂಶಗಳ ಗರಿಷ್ಠ ಮಟ್ಟವನ್ನೂ ತಲುಪಿತ್ತು. ಆದರೆ ವಹಿವಾಟಿನ ಅಂತ್ಯಕ್ಕೆ ಒಂದು ಗಂಟೆ ಇರುವಾಗ ಮಾರಾಟದ ಒತ್ತಡಕ್ಕೆ ಸಿಲುಕಿ ಇಳಿಕೆ ಕಾಣಲಾರಂಭಿಸಿತು. 181 ಅಂಶ ಇಳಿಕೆಯಾಗಿದೆ. 34,134 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ಮೂಲಸೌಕರ್ಯ, ಗ್ರಾಹಕ ಬಳಕೆ ವಸ್ತುಗಳು, ಐ.ಟಿ, ತೈಲ ಮತ್ತು ಅನಿಲ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾದವು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ನಿಫ್ಟಿ) 58 ಅಂಶ ಇಳಿಕೆ ಕಂಡು 10,245 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಏಷ್ಯಾ ಮತ್ತು ಯುರೋಪ್ ಮಾರುಕಟ್ಟೆಗಳಲ್ಲಿ ಏರುಮುಖ ವಹಿವಾಟು ನಡೆಯಿತು.

ಅಂಕಿ–ಅಂಶ

* 847 ಅಂಶ - ಹಿಂದಿನ ಎರಡು ವಹಿವಾಟು ಅವಧಿಗಳಲ್ಲಿ ಸೂಚ್ಯಂಕದ ಇಳಿಕೆ

* ₹ 618 ಕೋಟಿ - ಶುಕ್ರವಾರ ವಿದೇಶಿ ಸಾಂಸ್ಥಿಕ ಬಂಡವಾಳ ಹೊರಹರಿವು

* ₹ 2.14 ಕೋಟಿ - ಶುಕ್ರವಾರ ದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟ ಮಾಡಿರುವ ಷೇರುಗಳ ಮೌಲ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.