ADVERTISEMENT

ಮಾರಾಟದ ಒತ್ತಡಕ್ಕೆ ಇಳಿಕೆ ಕಂಡ ಸೂಚ್ಯಂಕ

ಪಿಟಿಐ
Published 25 ಆಗಸ್ಟ್ 2022, 13:21 IST
Last Updated 25 ಆಗಸ್ಟ್ 2022, 13:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಐ.ಟಿ, ಹಣಕಾಸು ಮತ್ತು ಬ್ಯಾಂಕಿಂಗ್ ಷೇರುಗಳು ಮಾರಾಟದ ಒತ್ತಡಕ್ಕೆ ಒಳಗಾಗಿದ್ದರಿಂದ ಷೇರುಪೇಟೆಗಳ ಗುರುವಾರದ ವಹಿವಾಟು ನಕಾರಾತ್ಮಕವಾಗಿ ಅಂತ್ಯ ಕಂಡಿತು.

ಸರ್ಕಾರಿ ಸಾಲಪತ್ರಗಳ ಆಗಸ್ಟ್ ತಿಂಗಳ ವಾಯಿದಾ ವಹಿವಾಟು ಗುರುವಾರ ಅಂತ್ಯವಾಗುವುದು ಹಾಗೂ ರೂಪಾಯಿ ಮೌಲ್ಯ ಇಳಿಕೆ ಸಹ ವಹಿವಾಟಿನ ಮೇಲೆ ಪರಿಣಾಮ ಬೀರಿದವು ಎಂದು ವರ್ತಕರು ಹೇಳಿದ್ದಾರೆ.

ಆರಂಭದಿಂದಲೂ ಸಕಾರಾತ್ಮಕ ಹಾದಿಯಲ್ಲೇ ಇದ್ದ ಬಿಎಸ್‌ಇ ಸೆನ್ಸೆಕ್ಸ್‌, ವಹಿವಾಟಿನ ಅಂತ್ಯದ ವೇಳೆಗೆ ಮಾರಾಟದ ಒತ್ತಡಕ್ಕೆ ಒಳಗಾಯಿತು. ಹೀಗಾಗಿ ಸೂಚ್ಯಂಕ 310 ಅಂಶ ಇಳಿಕೆ ಕಾಣುವಂತಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 82 ಅಂಶ ಇಳಿಕೆಯಾಗಿ 17,522 ಅಂಶಗಳಿಗೆ ತಲುಪಿತು.

ADVERTISEMENT

‘ಮಾರುಕಟ್ಟೆಯ ಅಸ್ಥಿರತೆ ನಿವಾರಿಸಲು ಕಚ್ಚಾ ತೈಲ ಪೂರೈಕೆಯನ್ನು ಒಪೆಕ್‌+ ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ಸೌದಿ ಅರೇಬಿಯಾ ಹೇಳಿದೆ. ಇದರಿಂದಾಗಿ ಕಚ್ಚಾ ತೈಲ ದರ ಏರಿದೆ. ಹೀಗಿದ್ದರೂ ಪ್ರವರ್ಧಮಾನಕ್ಕೆ ಬರುತ್ತಿರುವ ಇತರ ಮಾರುಕಟ್ಟೆಗಳಿಗೆ ಹೋಲಿಸಿದರೆ ಭಾರತದ ಷೇರುಪೇಟೆಯು ಗರಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ದೇಶಿ ಮಾರುಕಟ್ಟೆಗೆ ನೀಡುತ್ತಿರುವ ಬೆಂಬಲ ಮುಂದುವರಿಸಿದ್ದಾರೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್ ಹೇಳಿದ್ದಾರೆ.

ಬ್ರೆಂಟ್‌ ಕಚ್ಚಾ ತೈಲ ದರ ಶೇ 0.17ರಷ್ಟು ಏರಿಕೆ ಕಂಡು ಒಂದು ಬ್ಯಾರಲ್‌ಗೆ 101.3 ಡಾಲರ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.