ADVERTISEMENT

ಷೇರುಗಳ ಖರೀದಿ ಭರಾಟೆ: 51 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್

ಪಿಟಿಐ
Published 26 ಮೇ 2021, 14:17 IST
Last Updated 26 ಮೇ 2021, 14:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ತಂತ್ರಜ್ಞಾನ, ಹಣಕಾಸು ಮತ್ತು ಆಟೊಮೊಬೈಲ್‌ ವಲಯಗಳ ಷೇರುಗಳ ಖರೀದಿ ಭರಾಟೆ ಜೋರಾಗಿದ್ದ ಕಾರಣ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ 379.99 ಅಂಶ ಏರಿಕೆ ದಾಖಲಿಸಿತು.

ದಿನದ ವಹಿವಾಟಿನ ಅಂತ್ಯಕ್ಕೆ 51,017 ಅಂಶಗಳಲ್ಲಿ ಕೊನೆಗೊಂಡಿತು. ಮಾರ್ಚ್‌ 10ರ ನಂತರ ಸೆನ್ಸೆಕ್ಸ್‌ 51 ಸಾವಿರದ ಗಡಿ ದಾಟಿರುವುದು ಇದೇ ಮೊದಲು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 93 ಅಂಶ ಏರಿಕೆ ಕಂಡಿತು.

ಬಜಾಜ್‌ ಫಿನ್‌ಸರ್ವ್‌, ಬಜಾಜ್ ಫೈನಾನ್ಸ್, ಇನ್ಫೊಸಿಸ್, ಮಾರುತಿ, ಎಚ್‌ಡಿಎಫ್‌ಸಿ, ಎಲ್‌ಆ್ಯಂಡ್‌ಟಿ, ಟೆಕ್ ಮಹೀಂದ್ರ ಮತ್ತು ಮಹೀಂದ್ರ ಆ್ಯಂಡ್ ಮಹೀಂದ್ರ ಷೇರುಗಳು ಉತ್ತಮ ಗಳಿಕೆ ಕಂಡವು. ಪವರ್ ಗ್ರಿಡ್, ಎನ್‌ಟಿಪಿಸಿ, ಒಎನ್‌ಜಿಸಿ, ಕೋಟಕ್ ಬ್ಯಾಂಕ್, ಡಾ ರೆಡ್ಡೀಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಟಿಸಿ ಮತ್ತು ಭಾರ್ತಿ ಏರ್‌ಟೆಲ್ ಷೇರುಗಳು ಕುಸಿತ ದಾಖಲಿಸಿದವು.

ADVERTISEMENT

‘ಇನ್ನೊಂದು ಸುತ್ತಿನ ಪರಿಹಾರ ಕ್ರಮಗಳನ್ನು ಘೋಷಿಸಬಹುದು ಎಂಬ ನಿರೀಕ್ಷೆಯಲ್ಲಿ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಪ್ರವಾಸೋದ್ಯಮ, ಆತಿಥ್ಯ ಮತ್ತು ಎಂಎಸ್ಎಂಇ ವಲಯಗಳನ್ನು ಗಮನದಲ್ಲಿ ಇರಿಸಿಕೊಂಡು ಇನ್ನೊಂದು ಸುತ್ತಿನ ಆರ್ಥಿಕ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದರು.

ರಿಯಲ್ ಎಸ್ಟೇಟ್, ಮಾಹಿತಿ ತಂತ್ರಜ್ಞಾನ ವಲಯಗಳ ಷೇರುಗಳನ್ನು ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.