ADVERTISEMENT

ಕೊರೊನಾ ಭೀತಿ: ಷೇರುಪೇಟೆಯಲ್ಲಿ ಅತಿಯಾದ ಮಾರಾಟದ ಒತ್ತಡ

ವಾರದ ವಹಿವಾಟು: ಸೂಚ್ಯಂಕ 3,473 ಅಂಶ ಕುಸಿತ

ಪಿಟಿಐ
Published 14 ಮಾರ್ಚ್ 2020, 21:52 IST
Last Updated 14 ಮಾರ್ಚ್ 2020, 21:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಕೊರೊನಾ–2 ಸೋಂಕು ಸಾಂಕ್ರಾಮಿಕವಾಗಿ ಜಗತ್ತಿನಾದ್ಯಂತ ವ್ಯಾಪಿಸುತ್ತಿದ್ದು, ಭಾರತದ ಷೇರುಪೇಟೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ.

ಭಾರತವನ್ನೂ ಒಳಗೊಂಡು ಜಾಗತಿಕ ಷೇರುಪೇಟೆಗಳಲ್ಲಿ ಅತಿಯಾದ ಮಾರಾಟದ ಒತ್ತಡ ಕಂಡುಬರುತ್ತಿದೆ.

ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 3,473 ಅಂಶಗಳಷ್ಟು ಕುಸಿತ ಕಂಡಿದ್ದು, 34,103 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ADVERTISEMENT

ಶುಕ್ರವಾರದ ವಹಿವಾಟು ಭಾರಿ ಏರಿಳಿತ ಕಂಡು ಹೂಡಿಕೆದಾರರಲ್ಲಿ ಆತಂಕ ಮೂಡಿಸಿ ಅಂತಿಮವಾಗಿ 1,325 ಅಂಶಗಳ ಹೆಚ್ಚಳ
ದಾಖಲಿಸಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 1,034 ಅಂಶ ಕುಸಿತ ಕಂಡು, 9,955 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಜಾಗತಿಕ ಷೇರುಪೇಟೆಗಳ ಪಾಲಿಗೆ ವಾರದ ವಹಿವಾಟು ಅಂತ್ಯಂತ ಕೆಟ್ಟದಾಗಿತ್ತು. ಅಮೆರಿಕದ ಷೇರುಪೇಟೆಯು ನಾಲ್ಕು ದಿನಗಳ ವಹಿವಾಟಿನಲ್ಲಿ ಶೇ 18ರಷ್ಟು ಕುಸಿತ ಕಂಡಿದೆ ಎಂದು ತಜ್ಞರು ಹೇಳಿದ್ದಾರೆ.

ಮಂದಗತಿಯಲ್ಲಿರುವ ಜಾಗತಿಕ ಆರ್ಥಿಕತೆಯು ಕೊರೊನಾದಿಂದಾಗಿ ಹಿಂಜರಿತಕ್ಕೆ ಒಳಗಾಗುವ ಆತಂಕ ಎದುರಾಗಿದೆ. ಭಾರತವೂ ಇದರ ಪರಿಣಾಮಕ್ಕೆ ಒಳಗಾಗಲಿದೆ.

ಎಫ್‌ಪಿಐ ಹೊರಹರಿವು: ವಿದೇಶಿ ಬಂಡವಾಳ ಹೂಡಿಕೆದಾರರು ಷೇರುಪೇಟೆಯಲ್ಲಿ ನಿರಂತರವಾಗಿ ಮಾರಾಟಕ್ಕೆ ಹೆಚ್ಚಿನ ಗಮನ ನೀಡುತ್ತಿದ್ದಾರೆ.

ಐದು ವಹಿವಾಟು ಅವಧಿಗಳಲ್ಲಿ ₹16,790 ಕೋಟಿಗೂ ಅಧಿಕ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ತಿಂಗಳಿನಲ್ಲಿ ಇದುವರೆಗೆ ಒಟ್ಟಾರೆ ₹ 37,954 ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ.

₹ 15 ಲಕ್ಷ ಕೋಟಿ ಸಂಪತ್ತು ಕರಗಿತು
ಷೇರುಪೇಟೆಯಲ್ಲಿ ನಡೆಯುತ್ತಿರುವ ನಕಾರಾತ್ಮಕ ವಹಿವಾಟಿನಿಂದಾಗಿ ಹೂಡಿಕೆದಾರ ಸಂಪತ್ತು ಮೌಲ್ಯವೂ ಕರಗಲಾರಂಭಿಸಿದೆ. ಮಾರ್ಚ್‌ 6ರಿಂದ 13ರವರೆಗೆ ನಡೆದಿರುವ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹ 15.05 ಲಕ್ಷ ಕೋಟಿಗಳಷ್ಟು ಕರಗಿದೆ.

ಮುಂಬೈ ಷೇರುಪೇಟೆಯ ಬಂಡವಾಳ ಮೌಲ್ಯ ₹ 144.31 ಲಕ್ಷ ಕೋಟಿಗಳಿಂದ129.26 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.