ADVERTISEMENT

ಹೂಡಿಕೆದಾರರ ಸಂಪತ್ತು ವೃದ್ಧಿ

ಸಕಾರಾತ್ಮಕ ಹಾದಿಗೆ ಷೇರುಪೇಟೆ ವಹಿವಾಟು

ಪಿಟಿಐ
Published 23 ಫೆಬ್ರುವರಿ 2019, 20:00 IST
Last Updated 23 ಫೆಬ್ರುವರಿ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ನಿರಂತರವಾಗಿ ಇಳಿಮುಖವಾಗಿದ್ದದೇಶದ ಷೇರುಪೇಟೆಗಳ ವಹಿವಾಟು ಮತ್ತೆ ಚೇತರಿಕೆ ಹಾದಿಗೆ ಮರಳಿದೆ.

ಹಿಂದಿನ ವಾರದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ಕರಗಿತ್ತು. ಆದರೆ ಈ ವಾರ ಏರಿಕೆ ಕಂಡುಕೊಂಡಿದೆ.

ಐದು ದಿನಗಳ ವಹಿವಾಟು ಅವಧಿಯಲ್ಲಿ ಹೂಡಿಕೆದಾರರ ಸಂಪತ್ತು ₹ 2 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಇದರಿಂದ ಫೆಬ್ರುವರಿ 15ರ ಅಂತ್ಯಕ್ಕೆ ₹ 137 ಲಕ್ಷ ಕೋಟಿಯಷ್ಟಿದ್ದ ಷೇರುಪೇಟೆ ಬಂಡವಾಳ ಮೌಲ್ಯ ಫೆ. 22ರ ಅಂತ್ಯಕ್ಕೆ ₹ 139 ಲಕ್ಷ ಕೋಟಿಗೆ ಏರಿಕೆಯಾಗಿದೆ.

ADVERTISEMENT

ಫೆ. 7 ರಿಂದ 19ರವರೆಗೆ 9 ವಹಿವಾಟು ಅವಧಿಗಳಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 5 ಲಕ್ಷ ಕೋಟಿಯಷ್ಟು ಕರಗಿತ್ತು. ಬುಧವಾರ ಷೇರುಪೇಟೆ ವಹಿವಾಟು ಚೇತರಿಕೆ ಹಾದಿಗೆ ಮರಳಿದ್ದರಿಂದ ಹೂಡಿಕೆದಾರರ ಸಂಪತ್ತು ಮೌಲ್ಯದಲ್ಲಿಯೂ ಏರಿಕೆ ಕಂಡಬಂದಿದೆ.

ವಾರದ ವಹಿವಾಟು: ಐದು ದಿನಗಳ ವಾರದ ವಹಿವಾಟಿನಲ್ಲಿ ಎರಡು ದಿನ ಮಾತ್ರವೇ ಸೂಚ್ಯಂಕ ಏರಿಕೆಯಾಗಿದೆ.

ಫೆ. 15ರಂದು 35,808 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತ್ತು. ಇದಕ್ಕೆ ಹೋಲಿಸಿದರೆ ವಾರದ ವಹಿವಾಟಿನ ಆರಂಭದ ದಿನವಾದ ಸೋಮವಾರ (ಫೆ. 18) 35,498 ಅಂಶಗಳಿಗೆ ಇಳಿಕೆಯಾಗಿ ವಹಿವಾಟು ಅಂತ್ಯವಾಯಿತು. ಮಂಗಳವಾರ 35,352ಕ್ಕೆ ಇಳಿಕೆಯಾಯಿತು. ಬುಧವಾರದ ವಹಿವಾಟಿನಲ್ಲಿ 404 ಅಂಶಗಳ ಚೇತರಿಕೆ ಕಂಡಿತು. ಇದರಿಂದಾಗಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 1.78 ಲಕ್ಷ ಕೋಟಿಯಷ್ಟು ಹೆಚ್ಚಾಯಿತು.

ಗುರುವಾರದ ವಹಿವಾಟಿನಲ್ಲಿ ಸೂಚ್ಯಂಕ ಅಲ್ಪ ಏರಿಕೆ ಕಂಡಿತು. ಶುಕ್ರವಾರ 27 ಅಂಶ ಇಳಿಕೆ ಕಂಡಿತು.ಒಟ್ಟಾರೆ ವಾರದ ವಹಿವಾಟಿನಲ್ಲಿ62 ಅಂಶ ಹೆಚ್ಚಾಗಿದ್ದು, 35,871 ಅಂಶಗಳಿಗೆ ತಲುಪಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್ಇ) ನಿಫ್ಟಿ 67 ಅಂಶ ಹೆಚ್ಚಾಗಿ 10,791 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಗೊಂಡಿದೆ.

ಹೂಡಿಕೆಗೆ ‘ಎಫ್‌ಪಿಐ’ ಗಮನ
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ಫೆಬ್ರುವರಿಯಲ್ಲಿ ಷೇರುಪೇಟೆಯಲ್ಲಿ ಹೂಡಿಕೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ.

ಶುಕ್ರವಾರದ ವಹಿವಾಟಿನಲ್ಲಿ ಬಂಡವಾಳ ಮಾರುಕಟ್ಟೆಯಲ್ಲಿ ₹ 6,311 ಕೋಟಿಯಷ್ಟು ಹೂಡಿಕೆ ಮಾಡಿದ್ದಾರೆ. ಇದು ಫೆಬ್ರುವರಿ ತಿಂಗಳಿನಲ್ಲಿಯೇ ಗರಿಷ್ಠ ಮೊತ್ತವಾಗಿದೆ.ಫೆ.11ರಲ್ಲಿ ₹ 2,966 ಕೋಟಿ ಹೂಡಿಕೆ ಮಾಡಿದ್ದರು.

ವಹಿವಾಟು ಅವಧಿಯಲ್ಲಿಒಟ್ಟು ₹ 10,437.99 ಕೋಟಿ ಮೌಲ್ಯದ ಸಾಲಪತ್ರಗಳನ್ನು ಖರೀದಿಸಿದ್ದು, ₹ 4,126.98 ಕೋಟಿ ಮೌಲ್ಯದ ಸಾಲಪತ್ರಗಳನ್ನು ಮಾರಾಟ ಮಾಡಿದ್ದಾರೆ. ಹೀಗಾಗಿ ಒಟ್ಟಾರೆ ಹೂಡಿಕೆ ಮೊತ್ತ ₹ 6,311 ಕೋಟಿಗೆ ತಲುಪಿದೆ.

ಫೆಬ್ರುವರಿ 1 ರಿಂದ 15ರವರೆಗೆ ₹ 5,300 ಕೋಟಿ ಹೂಡಿಕೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.