ADVERTISEMENT

ಷೇರುಪೇಟೆ ಹೂಡಿಕೆದಾರರ ಸಂಪತ್ತು ಹೆಚ್ಚಳ

2018–19ನೇ ಹಣಕಾಸು ವರ್ಷದಲ್ಲಿ ₹ 8.83 ಲಕ್ಷ ಕೋಟಿ ವೃದ್ಧಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 19:07 IST
Last Updated 3 ಏಪ್ರಿಲ್ 2019, 19:07 IST
   

ಮುಂಬೈ: 2018–19ನೇ ಹಣಕಾಸು ವರ್ಷದಲ್ಲಿ ಷೇರುಪೇಟೆಯ ಹೂಡಿಕೆದಾರರ ಸಂಪತ್ತು ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ₹ 8.83 ಲಕ್ಷ ಕೋಟಿಗಳಷ್ಟು ವೃದ್ಧಿಯಾಗಿದೆ.

2018–19ನೇ ಹಣಕಾಸು ವರ್ಷದಲ್ಲಿ ದೇಶದ ಷೇರುಪೇಟೆಗಳ ವಹಿವಾಟು ಸಕಾರಾತ್ಮಕವಾಗಿ ಅಂತ್ಯಗೊಂಡಿದೆ. ಷೇರುಪೇಟೆಯ ಬಂಡವಾಳ ಮೌಲ್ಯ ₹ 142.17 ಲಕ್ಷ ಕೋಟಿಗಳಿಂದ ₹ 151 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ. 2017–18ನೇ ಹಣಕಾಸು ವರ್ಷದಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯ ₹ 20.70 ಲಕ್ಷ ಕೋಟಿಗಳಷ್ಟು ಏರಿಕೆ ಕಂಡಿತ್ತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಒಂದು ವರ್ಷಾವಧಿಯಲ್ಲಿ ಶೇ 17.30ರಷ್ಟು ಗಳಿಕೆ ಕಂಡಿದೆ. ಆದರೆ, ಮಧ್ಯಮ ಮತ್ತು ಸಣ್ಣ ಪ್ರಮಾಣದ ಷೇರುಗಳು ಕ್ರಮವಾಗಿ ಶೇ 11.6 ಮತ್ತು ಶೇ 11.57ರಷ್ಟು ಇಳಿಕೆ ಕಂಡಿವೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ಶೇ 14.93ರಷ್ಟು ಗಳಿಕೆ ಕಂಡಿದ್ದು, 11,623 ಅಂಶಗಳಿಗೆ ತಲುಪಿತ್ತು.

‘ಬ್ಯಾಂಕ್‌, ವಿದ್ಯುತ್‌ ಮತ್ತು ಐ.ಟಿ, ಎಫ್‌ಎಂಸಿಜಿ ಮತ್ತು ಔಷಧ ಷೇರುಗಳು ಉತ್ತಮ ಲಾಭ ಮಾಡಿಕೊಂಡಿವೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

‘ಹೂಡಿಕೆದಾರರು ಸಾರ್ವತ್ರಿಕ ಚುನಾವಣೆಯನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಕಂಪನಿಗಳ ನಾಲ್ಕನೇ ತ್ರೈಮಾಸಿಕದ ಫಲಿತಾಂಶ ಸಹ ಸೂಚ್ಯಂಕದ ಚಲನೆಯ ಮೇಲೆ ಪರಿಣಾಮ ಬೀರಲಿದೆ’ ಎಂದೂ ಹೇಳಿದ್ದಾರೆ.

ಸಕಾರಾತ್ಮಕ ಅಂಶಗಳು: ಚಿಲ್ಲರೆ ಹಣದುಬ್ಬರ ಇಳಿಕೆ, ತಗ್ಗಿದ ಚಾಲ್ತಿ ಖಾತೆ ಕೊರತೆ ಅಂತರ,ವಿದೇಶಿ ಸಾಂಸ್ಥಿಕ ಬಂಡವಾಳ ಒಳಹರಿವು, ರೂಪಾಯಿ ಮೌಲ್ಯ ವೃದ್ಧಿಯು ಪೇಟೆಯ ಚೇತರಿಕೆಗೆ ಕಾರಣವಾಗಿವೆ.

ನಕಾರಾತ್ಮಕ ಅಂಶಗಳು:ಮಂದಗತಿಯ ಜಾಗತಿಕ ಆರ್ಥಿಕ ಬೆಳವಣಿಗೆ, ಕಚ್ಚಾ ತೈಲ ದರ ಏರಿಕೆ ಮತ್ತು ವಾಣಿಜ್ಯ ಸಮರವು ಕೆಲ ಮಟ್ಟಿಗೆ ಖರೀದಿ ಉತ್ಸಾಹ ತಗ್ಗಿಸಿವೆ.

ವಿದೇಶಿ ಹೂಡಿಕೆ ನೆರವು
ಪಶ್ಚಿಮದ ದೇಶಗಳ ಕುಂಠಿತ ಆರ್ಥಿಕತೆ ಮತ್ತು ವಿದೇಶಿ ನಿಧಿಗಳ (ಎಫ್‌ಐಐ) ದಾಖಲೆ ಪ್ರಮಾಣದ ಒಳ ಹರಿವಿನಿಂದಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 12 ವರ್ಷಗಳಲ್ಲಿ ಗರಿಷ್ಠ ಏರಿಕೆ ದಾಖಲಿಸಿದೆ.

ಈ ವರ್ಷದ ಫೆಬ್ರುವರಿ 19ರಿಂದೀಚೆಗೆ 29 ವಹಿವಾಟು ದಿನಗಳಲ್ಲಿ ಸೂಚ್ಯಂಕವು 3,525 (ಶೇ 10.5) ಗಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.