ಮುಂಬೈ: ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ₹60 ಕೋಟಿ ವಂಚನೆ ಪ್ರಕರಣ ದಾಖಲಾದ ಬೆನ್ನಲ್ಲೆ, ಸಹ ಮಾಲೀಕತ್ವದಲ್ಲಿರುವ ಮುಂಬೈನ ಜನಪ್ರಿಯ ‘ಬಾಸ್ಟಿಯನ್ ಬಾಂದ್ರಾ’ ರೆಸ್ಟೋರೆಂಟ್ ಕಾರ್ಯಾಚರಣೆ ಸ್ಥಗಿತಗೊಳಿಸಲಿದೆ ಎಂದು ಶಿಲ್ಪಾ ತಿಳಿಸಿದ್ದಾರೆ.
ಸೆ.4ರಿಂದ ರೆಸ್ಟೋರೆಂಟ್ ಕಾರ್ಯಾಚರಣೆ ನಿಲ್ಲಿಸುತ್ತಿದೆ, ಈ ರೆಸ್ಟೋರೆಂಟ್ ಹಲವರ ಮೆಚ್ಚಿನ ಜಾಗವಾಗಿತ್ತು ಎಂದು ಶಿಲ್ಪಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ
ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಶಿಲ್ಪಾ, ‘ಈ ಗುರುವಾರ ಮುಂಬೈನ ಜನಪ್ರಿಯ ರೆಸ್ಟೋರೆಂಟ್ ‘ಬಾಸ್ಟಿಯನ್ ಬಾಂದ್ರಾ’ದ ಯುಗ ಅಂತ್ಯವಾಗುತ್ತಿದೆ. ಈ ಜಾಗ ಹಲವು ನೆನಪುಗಳಿಗೆ, ಮರೆಯಲಾಗದ ರಾತ್ರಿಗಳಿಗೆ ಸಾಕ್ಷಿಯಾಗಿದೆ. ಹೀಗಾಗಿ ನಮ್ಮ ನಿಕಟವರ್ತಿಗಳಿಗೆ ಅದ್ಭುತ ಸಂಜೆಯನ್ನು ಆಯೋಜಿಸಿದ್ದೇವೆ’ ಎಂದು ಬರೆದುಕೊಂಡಿದ್ದಾರೆ.
2016ರಲ್ಲಿ ಈ ರೆಸ್ಟೋರೆಂಟ್ ಆರಂಭವಾಗಿತ್ತು. ರಂಜಿತ್ ಬಾಂದ್ರಾ ಮಾಲೀಕತ್ವದ ರೆಸ್ಟೋರೆಂಟ್‌ಗೆ ಶಿಲ್ಪಾ ಶೆಟ್ಟಿ ಸಹ ಮಾಲೀಕರಾಗಿದ್ದರು.
ಈ ಹಿಂದೆ ಬೆಸ್ಟ್ ಡೀಲ್ ಟಿವಿ ಕಂಪನಿಗೆ ಸಂಬಂಧಿಸಿದಂತೆ ಮುಂಬೈ ಮೂಲದ ಉದ್ಯಮಿ ದೀಪಕ್ ಕೊಠಾರಿ, ಜುಹು ಪೊಲೀಸ್ ಠಾಣೆಯಲ್ಲಿ ಶಿಲ್ಪಾ ಶೆಟ್ಟಿ ಕುಂದ್ರಾ ಮತ್ತು ರಾಜ್ ಕುಂದ್ರಾ ವಿರುದ್ಧ ₹60 ಕೋಟಿ ಸಾಲ ವಂಚನೆ ಪ್ರಕರಣ ದಾಖಲಿಸಿದ್ದರು. ಆದರೆ ಈ ಆರೋಪವನ್ನು ದಂಪತಿ ಅಲ್ಲಗೆಳೆದಿದ್ದಾರೆ. ಜತೆಗೆ ಬಹಳ ಹಿಂದೆ ನಡೆದ ವ್ಯವಹಾರವಿದು. ಕಂಪನಿಯು ಆರ್ಥಿಕ ಸಂಕಷ್ಟ ಎದುರಿಸಿತ್ತು ಮತ್ತು ದೀರ್ಘಕಾಲದ ಕಾನೂನು ಸಂಘರ್ಷ ಎದುರಿಸುತ್ತಿತ್ತು’ ಎಂದು ಶಿಲ್ಪಾ ಶೆಟ್ಟಿ ಪರ ವಕೀಲ ಪ್ರಶಾಂತ್ ಪಾಟೀಲ್ ಹೇಳಿದ್ದಾರೆ
ಈ ನಡುವೆ ಶಿಲ್ಪಾ ಶೆಟ್ಟಿ ದಂಪತಿಯ ಪ್ರತಿಷ್ಠೆಯಾಗಿದ್ದ ಬಾಸ್ಟಿಯನ್ ರೆಸ್ಟೋರೆಂಟ್‌ಗೆ ಬೀಗ ಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.