ADVERTISEMENT

ಹಡಗು ನಿರ್ಮಾಣ: 2 ಯೋಜನೆಗಳಿಗೆ ಮಾರ್ಗಸೂಚಿ; ಒಟ್ಟು ₹44,700 ಕೋಟಿ ನಿಗದಿ

ಪಿಟಿಐ
Published 28 ಡಿಸೆಂಬರ್ 2025, 13:34 IST
Last Updated 28 ಡಿಸೆಂಬರ್ 2025, 13:34 IST
<div class="paragraphs"><p>ಹಡಗು</p></div>

ಹಡಗು

   

ನವದೆಹಲಿ: ಹಡಗುಗಳ ನಿರ್ಮಾಣಕ್ಕೆ ಸಂಬಂಧಿಸಿದ ಎರಡು ಯೋಜನೆಗಳಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕೇಂದ್ರ ಬಂದರು, ಹಡಗು ನಿರ್ಮಾಣ ಮತ್ತು ಜಲಮಾರ್ಗ ಸಚಿವಾಲಯವು ಅಧಿಸೂಚನೆಯಲ್ಲಿ ಪ್ರಕಟಿಸಿದೆ. ಈ ಎರಡು ಯೋಜನೆಗಳಿಗಾಗಿ ಒಟ್ಟು ₹44,700 ಕೋಟಿ ನಿಗದಿ ಮಾಡಲಾಗಿದೆ.

ಹಡಗು ನಿರ್ಮಾಣಕ್ಕೆ ಹಣಕಾಸಿನ ನೆರವು ಯೋಜನೆ (ಎಸ್‌ಬಿಎಫ್‌ಎಎಸ್‌) ಮತ್ತು ಹಡಗು ನಿರ್ಮಾಣ ಅಭಿವೃದ್ಧಿ ಯೋಜನೆ (ಎಸ್‌ಬಿಡಿಎಸ್‌) ದೇಶದಲ್ಲಿ ಹಡಗು ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿವೆ.

ADVERTISEMENT

ಎಸ್‌ಬಿಎಫ್‌ಎಎಸ್‌ ಅಡಿಯಲ್ಲಿ ಒಟ್ಟು ₹24,737 ಕೋಟಿಯನ್ನು ನಿಗದಿ ಮಾಡಲಾಗಿದೆ. ಇದರ ಅಡಿಯಲ್ಲಿ ಕೇಂದ್ರ ಸರ್ಕಾರವು ಪ್ರತಿ ಹಡಗು ನಿರ್ಮಾಣಕ್ಕೆ ಶೇ 15ರಿಂದ ಶೇ 25ರವರೆಗೆ ಹಣಕಾಸಿನ ನೆರವು ಒದಗಿಸುತ್ತದೆ. ಎಸ್‌ಬಿಡಿಎಸ್‌ ಯೋಜನೆಯು ₹19,989 ಕೋಟಿ ಗಾತ್ರದ್ದಾಗಿದ್ದು, ಇದು ದೀರ್ಘಾವಧಿಯಲ್ಲಿ ಸಾಮರ್ಥ್ಯ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ದೇಶದಲ್ಲಿ ಹಡಗು ನಿರ್ಮಾಣ ಕೆಲಸಗಳಿಗೆ ಈ ಯೋಜನೆಗಳು ಸ್ಥಿರವಾದ ಹಾಗೂ ಪಾರದರ್ಶಕವಾದ ಚೌಕಟ್ಟೊಂದನ್ನು ರೂಪಿಸಿ, ಆ ಚಟುವಟಿಕೆಗಳಿಗೆ ಮತ್ತೆ ಜೀವ ನೀಡಲಿವೆ ಎಂದು ಕೇಂದ್ರ ಬಂದರು ಸಚಿವ ಸರ್ವಾನಂದ ಸೊನೊವಾಲ್‌ ಅವರು ಹೇಳಿರುವುದಾಗಿ ಪ್ರಕಟಣೆ ತಿಳಿಸಿದೆ.

ಹೊಸ ಯೋಜನೆಗಳು ಹಡಗುಗಳನ್ನು ಭಾರತದಲ್ಲಿಯೇ ಗುಜರಿಗೆ ಹಾಕುವುದನ್ನು ಉತ್ತೇಜಿಸುವ ಅಂಶವನ್ನೂ ಒಳಗೊಂಡಿದೆ. ಭಾರತದಲ್ಲಿ ಹಡಗುಗಳನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆ ಹಡಗಿನ ಗುಜರಿ ಬೆಲೆಯ ಶೇಕಡ 40ರಷ್ಟನ್ನು ಸಾಲದ ರೂಪದಲ್ಲಿ ಪಡೆಯುವ ಅವಕಾಶ ಇರುತ್ತದೆ.

ಮುಂದಿನ ಒಂದು ದಶಕದಲ್ಲಿ ಎಸ್‌ಬಿಎಫ್‌ಎಎಸ್‌ ಮೂಲಕ ₹96 ಸಾವಿರ ಕೋಟಿಯಷ್ಟು ಮೊತ್ತದ ಹಡಗುಗಳ ನಿರ್ಮಾಣಕ್ಕೆ ನೆರವು ಒದಗಿಸುವ ನಿರೀಕ್ಷೆ ಇದೆ, ಇದು ದೇಶದಲ್ಲಿ ಹಡಗು ನಿರ್ಮಾಣಕ್ಕೆ ಉತ್ತೇಜನ ನೀಡುತ್ತದೆ, ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಯೋಜನೆಯು ಹಡಗು ನಿರ್ಮಾಣಕ್ಕಾಗಿನ ಹೊಸ ಕ್ಲಸ್ಟರ್‌ಗಳ ಅಭಿವೃದ್ಧಿಗೆ, ಹಳೆಯ ನಿರ್ಮಾಣ ಘಟಕಗಳ ವಿಸ್ತರಣೆ ಮತ್ತು ಅಭಿವೃದ್ಧಿಗೆ ಕೂಡ ನೆರವಾಗಲಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.