ADVERTISEMENT

ವಿತ್ತೀಯ ಶಿಸ್ತು ಕಾಯ್ದುಕೊಳ್ಳುವಲ್ಲಿ ಭಾರತ ವಿಫಲ: ಎಸ್‌ಆ್ಯಂಡ್‌ಪಿ

13ನೇ ವರ್ಷವೂ ಬಿಬಿಬಿ ಮೈನಸ್‌ ರೇಟಿಂಗ್ಸ್‌ ನೀಡಿದ ಸಂಸ್ಥೆ

ಪಿಟಿಐ
Published 11 ಜೂನ್ 2020, 16:13 IST
Last Updated 11 ಜೂನ್ 2020, 16:13 IST
   

ನವದೆಹಲಿ: ವಿತ್ತೀಯ ಶಿಸ್ತು ಕಾಯ್ದುಕೊಳ್ಳುವಲ್ಲಿ ಭಾರತಕ್ಕೆ ನೀಡಿರುವ ರೇಟಿಂಗ್ಸ್‌ ಬದಲಿಸಲು ಜಾಗತಿಕ ಸಂಸ್ಥೆ ಎಸ್‌ಆ್ಯಂಡ್‌ಪಿ ನಿರಾಕರಿಸಿದೆ. ಸತತ 13ನೇ ವರ್ಷವೂ‘ಬಿಬಿಬಿಮೈನಸ್‌’ ನೀಡಿದೆ. ಆದರೆ, ಆರ್ಥಿಕ ಮುನ್ನೋಟ ಸ್ಥಿರವಾಗಿರಲಿದೆ ಎಂದು ತಿಳಿಸಿದೆ.

ವಿತ್ತೀಯ ಶಿಸ್ತು ಕಾಯ್ದುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ದೇಶದ ವಿತ್ತೀಯ ಸ್ಥಿತಿಯು ಅಸ್ಥಿರವಾಗಿದೆ. ಆದರೆ,2021ರಿಂದ ವಿತ್ತೀಯ ಸ್ಥಿತಿ ಮತ್ತು ಆರ್ಥಿಕತೆಯು ಸ್ಥಿರತೆಗೆ ಬರಲಿದ್ದು, ಚೇತರಿಸಿಕೊಳ್ಳಲು ಆರಂಭಿಸಲಿದೆ. ದೀರ್ಘಾವಧಿಯಲ್ಲಿ ಜಿಡಿಪಿ ಬೆಳವಣಿಗೆಗೆ ಅಡೆತಡೆಗಳು ಹೆಚ್ಚಾಗುತ್ತಿದ್ದು, ಆರ್ಥಿಕ ಸುಧಾರಣಾ ಕ್ರಮಗಳನ್ನು ಸರಿಯಾಗಿ ಜಾರಿಗೊಳಿಸಿದರೆ ಗರಿಷ್ಠ ಮಟ್ಟದ ಬೆಳವಣಿಗೆ ಸಾಧ್ಯವಾಗಲಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆ ದರ ಶೇ 5ಕ್ಕೆ ಇಳಿಕೆಯಾಗಲಿದೆ ಎಂದು ಹೇಳಿರುವ ಸಂಸ್ಥೆಯು, ಭಾರತವು ಕೋವಿಡ್‌–19 ಬಿಕ್ಕಟ್ಟಿನಿಂದ ಹೊರಬಂದು ಚೇತರಿಸಿಕೊಳ್ಳುವ ನಿರೀಕ್ಷೆ ಇರುವುದರಿಂದ ಸ್ಥಿರ ಮುನ್ನೋಟ ನೀಡಲಾಗಿದೆ ಎಂದು ತಿಳಿಸಿದೆ.

ADVERTISEMENT

2021–22ರಲ್ಲಿ ಜಿಡಿಪಿಯು ಶೇ 8.5ರಷ್ಟಾಗಲಿದೆ. ಆದರೆ, 2022–23ರಲ್ಲಿ ಶೇ 6.5ಕ್ಕೆ ಇಳಿಕೆ ಕಾಣಲಿದೆ ಎಂದೂ ಹೇಳಿದೆ.

ಜಿಡಿಪಿ ಬೆಳವಣಿಗೆಯು ಅಂದಾಜಿಗಿಂತಲೂ ಕೆಳ ಮಟ್ಟಕ್ಕೆ ಇಳಿಕೆ ಕಂಡರೆ, ರೇಟಿಂಗ್ಸ್‌ನಲ್ಲಿ ಬದಲಾವಣೆ ಮಾಡಲಾಗುವುದು. ವಿತ್ತೀಯ ಕೊರತೆಯಲ್ಲಿ ಏರಿಕೆ ಮತ್ತು ರಾಜಕೀಯ ವಿದ್ಯಮಾನಗಳು ಆರ್ಥಿಕ ಸುಧಾರಣಾ ಕ್ರಮಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.