ADVERTISEMENT

ತೆರಿಗೆ ವಿನಾಯ್ತಿ ಪಡೆಯಲು ಹೂಡಿಕೆ ಮಿತಿ ಹೆಚ್ಚಳ: ಸ್ಟಾರ್ಟ್‌ಅಪ್‌ ನಿಯಮ ಸಡಿಲ

ಪಿಟಿಐ
Published 23 ಫೆಬ್ರುವರಿ 2019, 20:00 IST
Last Updated 23 ಫೆಬ್ರುವರಿ 2019, 20:00 IST
ಸ್ಟಾರ್ಟ್‌ಅಪ್‌
ಸ್ಟಾರ್ಟ್‌ಅಪ್‌   

ನವದೆಹಲಿ: ಸ್ಟಾರ್ಟ್‌ಅಪ್‌ಗಳ ವ್ಯಾಖ್ಯಾನ ಸಡಿಲಿಸಿರುವ ಕೇಂದ್ರ ಸರ್ಕಾರವು, ₹ 25 ಕೋಟಿವರೆಗಿನಬಂಡವಾಳ ಹೂಡಿಕೆಗೆ ತೆರಿಗೆ ವಿನಾಯ್ತಿ ಪಡೆಯುವ ಸೌಲಭ್ಯ ಕಲ್ಪಿಸಿದೆ.

ಸರ್ಕಾರದ ಈ ನಿರ್ಧಾರವು ನವೋದ್ಯಮಿಗಳ ಪಾಲಿಗೆ ನೆಮ್ಮದಿ ನೀಡಲಿದೆ. ಹೊಸ ಬಂಡವಾಳ ಹೂಡಿಕೆಗೆ ಅನ್ವಯಿಸುವ ತೆರಿಗೆ ಪಾವತಿ ಸಂಬಂಧ ಆದಾಯ ತೆರಿಗೆ ಇಲಾಖೆಯು ನೋಟಿಸ್‌ ನೀಡಿದ್ದರಿಂದ ಹಲವಾರು ಸ್ಟಾರ್ಟ್‌ಅಪ್‌ಗಳ ವಹಿವಾಟಿಗೆ ಧಕ್ಕೆ ತಟ್ಟಿತ್ತು. ತಾವು ಪಡೆದುಕೊಂಡ ಬಂಡವಾಳದ ನೆರವಿಗೆ ತೆರಿಗೆ ಪಾವತಿಸುವುದಕ್ಕೆ ನವೋದ್ಯಮಗಳು ಆತಂಕ ವ್ಯಕ್ತಪಡಿಸಿದ್ದವು.

ಇದಕ್ಕೂ ಮೊದಲು, ಹೊಸ ಹೂಡಿಕೆದಾರರೂ ಸೇರಿದಂತೆ ನವೋದ್ಯಮದಲ್ಲಿನ ಒಟ್ಟಾರೆ ಹೂಡಿಕೆ ಮೊತ್ತವು ₹ 10 ಕೋಟಿ ಮೀರದಿದ್ದರೆ ಮಾತ್ರ ತೆರಿಗೆ ವಿನಾಯ್ತಿ ದೊರೆಯುತ್ತಿತ್ತು. ಆ ಗರಿಷ್ಠ ಮಿತಿಯನ್ನು ಈಗ ₹ 25 ಕೋಟಿಗೆ ಹೆಚ್ಚಿಸಲಾಗಿದೆ.

ADVERTISEMENT

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 56(2)(viib) ಅಡಿ, ನವೋದ್ಯಮಗಳು ಬಂಡವಾಳ ಹೂಡಿಕೆಗೆ ತೆರಿಗೆ ವಿನಾಯ್ತಿ ಪಡೆಯುವುದಕ್ಕೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಲಾಗಿದೆ.

ತೆರಿಗೆ ವಿನಾಯ್ತಿ ಸೌಲಭ್ಯ ಕಲ್ಪಿಸಲು ಇಲಾಖೆಯು ಸ್ಟಾರ್ಟ್‌ಅಪ್‌ಗಳ ವ್ಯಾಖ್ಯಾನ ಸರಳಗೊಳಿಸಿದೆ. ಅಸ್ತಿತ್ವಕ್ಕೆ ಬಂದ ನಂತರ ಅಥವಾ ನೋಂದಣಿಯಾದ ನಂತರದ ಯಾವುದೇ ಹಣಕಾಸು ವರ್ಷದಲ್ಲಿ ವಾರ್ಷಿಕ ವಹಿವಾಟು ಸದ್ಯದ ₹ 25 ಕೋಟಿಗೆ ಬದಲಾಗಿ ₹ 100 ಕೋಟಿ ದಾಟದ ಉದ್ದಿಮೆಯನ್ನು ಸ್ಟಾರ್ಟ್‌ಅಪ್‌ ಎಂದು ಪರಿಗಣಿಸಲು ನಿರ್ಧರಿಸಲಾಗಿದೆ.

₹ 100 ಕೋಟಿಗಳಷ್ಟು ಒಟ್ಟು ಸಂಪತ್ತು ಹೊಂದಿರುವ ಅಥವಾ ವಾರ್ಷಿಕ ವಹಿವಾಟು ₹ 250 ಕೋಟಿಗಳಷ್ಟು ಇರುವ ಷೇರುಪೇಟೆಯಲ್ಲಿ ವಹಿವಾಟು ನಡೆಸುವ ಸಂಸ್ಥೆಯು, ಸ್ಟಾರ್ಟ್‌ಅಪ್‌ನಲ್ಲಿ ₹ 25 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಹೂಡಿಕೆ ಮಾಡಿದ್ದರೆ ಅದಕ್ಕೂ ತೆರಿಗೆ ವಿನಾಯ್ತಿ ಅನ್ವಯವಾಗಲಿದೆ. ಅನಿವಾಸಿ ಭಾರತೀಯರು, ಪರ್ಯಾಯ ಹೂಡಿಕೆ ನಿಧಿಗಳು ₹ 25 ಕೋಟಿಗಿಂತ ಹೆಚ್ಚಿನ ಮೊತ್ತ ಹೂಡಿಕೆ ಮಾಡಿದ್ದರೂ ಈ ಸೌಲಭ್ಯ ಪಡೆಯಬಹುದು.

‘ಡಿಪಿಐಐಟಿ’ಯಿಂದ ‍ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಎಂದು ಮಾನ್ಯತೆ ಪಡೆದ ನವೋದ್ಯಮವು ತೆರಿಗೆ ವಿನಾಯ್ತಿಗೆ ಅರ್ಹವಾಗಲಿದೆ.

ಈ ಹೊಸ ತೆರಿಗೆ ವಿನಾಯ್ತಿ ಪಡೆಯಲು ಬಯಸುವ ನವೋದ್ಯಮಗಳು ಸಾರಿಗೆ ವಾಹನಗಳಲ್ಲಿ ₹ 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಹೂಡಿಕೆ ಮಾಡಬಾರದು ಎನ್ನುವ ನಿಬಂಧನೆ ವಿಧಿಸಲಾಗಿದೆ. ವಿನಾಯ್ತಿಗಳನ್ನು ಪಡೆಯಲು ಅರ್ಹ ನವೋದ್ಯಮಗಳು ಸ್ವಯಂ ಘೋಷಣಾ ಪತ್ರಗಳನ್ನು ಸಲ್ಲಿಸಬೇಕು ಎಂದೂ ಸೂಚಿಸಲಾಗಿದೆ.

*
ಸ್ಟಾರ್ಟ್‌ಅಪ್‌ಗಳಿಗೆ ಎದುರಾಗಿದ್ದ ಪ್ರಮುಖ ಅಡಚಣೆಯೊಂದು ಈಗ ದೂರವಾಗಿದೆ.
–ಸಚಿನ್‌ ತಪರಿಯಾ,ಲೋಕಲ್‌ ಸರ್ಕಲ್ಸ್‌ನ ಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.