
ಮುಂಬೈ: ದೇಶದ ಷೇರುಪೇಟೆಗಳ ಪ್ರಮುಖ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಮೂರನೆಯ ದಿನವೂ ಇಳಿಕೆ ಕಂಡಿವೆ. ಜಾಗತಿಕ ಮಟ್ಟದಲ್ಲಿನ ಬಿಕ್ಕಟ್ಟುಗಳು ನಷ್ಟದ ಅಪಾಯ ಹೆಚ್ಚಿರುವ ಹೂಡಿಕೆಗಳಿಂದ ಹೂಡಿಕೆದಾರರು ದೂರ ಇರುವಂತೆ ಮಾಡಿವೆ.
ಸೂಚ್ಯಂಕಗಳು ಬುಧವಾರದ ವಹಿವಾಟಿನ ಆರಂಭದಲ್ಲಿ ಹೆಚ್ಚು ಕುಸಿದಿದ್ದವು. ಆದರೆ ನಂತರದಲ್ಲಿ ಕೆಲವು ಪ್ರಮುಖ ಕಂಪನಿಗಳ ಷೇರುಗಳನ್ನು ಹೂಡಿಕೆದಾರರು ಖರೀದಿಸಿದ ಕಾರಣದಿಂದಾಗಿ, ಕುಸಿತದ ಪ್ರಮಾಣವು ಕಡಿಮೆ ಆಯಿತು ಎಂದು ವರ್ತಕರು ತಿಳಿಸಿದ್ದಾರೆ.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 82 ಸಾವಿರದ ಮಟ್ಟಕ್ಕಿಂತ ಕೆಳಕ್ಕೆ ಬಂದಿದೆ. ದಿನದ ವಹಿವಾಟಿನ ಅಂತ್ಯಕ್ಕೆ 270 ಅಂಶ ಕುಸಿದಿದೆ. ವಹಿವಾಟಿನ ನಡುವಿನಲ್ಲಿ ಸೆನ್ಸೆಕ್ಸ್ 1,056 ಅಂಶದವರೆಗೂ ಕುಸಿದಿತ್ತು. ರಾಷ್ಟ್ರೀಯ ಷೇರುಪೇಟೆಯ ಸೂಚ್ಯಂಕ ನಿಫ್ಟಿ 75 ಅಂಶ ಇಳಿಕೆಯಾಗಿದೆ.
ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಈ ನಡುವೆ ಹಣಕಾಸು, ಬ್ಯಾಂಕಿಂಗ್, ಗ್ರಾಹಕ ಬಳಕೆ ಉತ್ಪನ್ನಗಳ ಷೇರುಗಳ ಮಾರಾಟವು ಬುಧವಾರ ಜೋರಾಗಿತ್ತು ಎಂದು ವರ್ತಕರು ತಿಳಿಸಿದ್ದಾರೆ.
‘ಜಾಗತಿಕ ಮಟ್ಟದಲ್ಲಿನ ಸಂಗತಿಗಳು ಹೂಡಿಕೆದಾರರ ಉತ್ಸಾಹವನ್ನು ಕುಂದಿಸಿವೆ. ಆದರೆ ಬುಧವಾರ ಹೂಡಿಕೆದಾರರು ಕೆಲವು ಆಯ್ದ ಕಂಪನಿಗಳ ಷೇರುಗಳನ್ನು ಖರೀದಿಸಿದರು. ಇದು ಆರಂಭಿಕ ಕುಸಿತದ ಪ್ರಮಾಣವನ್ನು ಕಡಿಮೆ ಮಾಡಲು ನೆರವಾಯಿತು’ ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.