ADVERTISEMENT

ಬ್ಯಾಂಕಿಂಗ್‌ ಷೇರುಗಳ ಬೆಲೆ ಹೆಚ್ಚಳ

ಕೇಂದ್ರದಿಂದ ₹ 48,239 ಕೋಟಿ ಪುನರ್ಧನ ಘೋಷಣೆ ಪ್ರಭಾವ

ಪಿಟಿಐ
Published 21 ಫೆಬ್ರುವರಿ 2019, 20:11 IST
Last Updated 21 ಫೆಬ್ರುವರಿ 2019, 20:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ/ನವದಹೆಲಿ: ಕೇಂದ್ರ ಸರ್ಕಾರವು ಬ್ಯಾಂಕ್‌ಗಳಿಗೆ ಪುನರ್ಧನ ಘೋಷಿಸಿರುವುದರಿಂದ ಗುರುವಾರದ ವಹಿವಾಟಿನಲ್ಲಿ ಬ್ಯಾಂಕಿಂಗ್‌ ಷೇರುಗಳ ಬೆಲೆ ಶೇ 19ರವರೆಗೂ ಏರಿಕೆ ಕಂಡಿದೆ.

ಲೋಹ, ಔಷಧ ಮತ್ತು ಬ್ಯಾಂಕಿಂಗ್ ವಲಯದ ಷೇರುಗಳ ಬೆಲೆಯಲ್ಲಿನ ಹೆಚ್ಚಳದಿಂದ ಷೇರುಪೇಟೆಗಳಲ್ಲಿ ಸೂಚ್ಯಂಕಗಳು ಎರಡನೇ ದಿನವೂ ಏರಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 142 ಅಂಶ ಹೆಚ್ಚಾಗಿ 35,898 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 54 ಅಂಶ ಹೆಚ್ಚಾಗಿ 10,789 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ದಿನದ ವಹಿವಾಟಿನಲ್ಲಿ ಟಾಟಾ ಮೋಟರ್ಸ್‌ ಶೇ 2.94ರಷ್ಟು ಗರಿಷ್ಠ ಗಳಿಕೆ ಕಂಡುಕೊಂಡಿತು.

‘ಬ್ಯಾಂಕ್‌ಗಳಿಗೆ ಪುನರ್ಧನ ಘೋಷಣೆಯಿಂದಾಗಿ ಹೂಡಿಕೆ ಚಟುವಟಿಕೆ ಹೆಚ್ಚಾಗಿದೆ. ಇದು ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ಕೇಂದ್ರೀಯ ಬ್ಯಾಂಕ್‌, ಬಡ್ಡಿದರ ಏರಿಕೆ ಮಾಡುವ ವಿಚಾರದಲ್ಲಿ ತಾಳ್ಮೆಯಿಂದ ವರ್ತಿಸುತ್ತಿದೆ. ಹೀಗಾಗಿ ಜಾಗತಿಕ ಮಾರುಕಟ್ಟೆಗಳಲ್ಲಿ ಮಿಶ್ರ ವಹಿವಾಟು ನಡೆಯುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ರೂಪಾಯಿ ಮೌಲ್ಯ ಇಳಿಕೆ
ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಗುರುವಾರ 11 ಪೈಸೆ ಇಳಿಕೆಯಾಗಿ ಒಂದು ಡಾಲರ್‌ಗೆ ₹ 71.24ಕ್ಕೆ ತಲುಪಿದೆ.

ಕರೆನ್ಸಿ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 0.09ರಷ್ಟು ಹೆಚ್ಚಾಗಿ ಒಂದು ಬ್ಯಾರೆಲ್‌ಗೆ 67.14 ಡಾಲರ್‌ಗಳಂತೆ ಮಾರಾಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.