ADVERTISEMENT

ಷೇರುಪೇಟೆ: ದಾಖಲೆ ಮಟ್ಟಕ್ಕೆ ಏರಿ, ಇಳಿದ ಸೂಚ್ಯಂಕಗಳು

ಪಿಟಿಐ
Published 27 ನವೆಂಬರ್ 2025, 15:41 IST
Last Updated 27 ನವೆಂಬರ್ 2025, 15:41 IST
ಸೂಚ್ಯಂಕ
ಸೂಚ್ಯಂಕ   

ಮುಂಬೈ: ದೇಶದ ಷೇರುಪೇಟೆ ಸೂಚ್ಯಂಕಗಳು ಗುರುವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದ್ದವು. ಆದರೆ, ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಮುಂದಾಗಿದ್ದರಿಂದ, ಆರಂಭಿಕ ಏರಿಕೆಯನ್ನು ನಂತರದ ವಹಿವಾಟಿನಲ್ಲಿ ಉಳಿಸಿಕೊಳ್ಳಲಾಗಲಿಲ್ಲ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 110 ಅಂಶ ಏರಿಕೆಯಾಗಿ, 85,720ಕ್ಕೆ ವಹಿವಾಟು ಅಂತ್ಯಗೊಂಡಿದೆ. ವಹಿವಾಟಿನ ವೇಳೆ ಸೆನ್ಸೆಕ್ಸ್ 86,055ಕ್ಕೆ ಮುಟ್ಟಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 10 ಅಂಶ ಹೆಚ್ಚಳವಾಗಿ 26,215ಕ್ಕೆ ಕೊನೆಗೊಂಡಿದೆ. ವಹಿವಾಟಿನ ವೇಳೆ ಇದು 26,310 ಅಂಶದವರೆಗೆ ತಲುಪಿತ್ತು.

2024ರ ಸೆಪ್ಟೆಂಬರ್ 27ರಂದು ಸೆನ್ಸೆಕ್ಸ್ 85,978 ಅಂಶ ಮತ್ತು ನಿಫ್ಟಿ 26,277 ಅಂಶಕ್ಕೆ ತಲುಪಿತ್ತು. ಇದು ಇದುವರೆಗಿನ ಸಾರ್ವಕಾಲಿಕ ಗರಿಷ್ಠ ಮಟ್ಟದ ಏರಿಕೆ ಆಗಿತ್ತು. ಗುರುವಾರದ ವಹಿವಾಟಿನಲ್ಲಿ ನಡುವಿನಲ್ಲಿ ಈ ದಾಖಲೆಯನ್ನು ಸೂಚ್ಯಂಕಗಳು ಮೀರಿದಂತಾಗಿದೆ.

ADVERTISEMENT

ಅಮೆರಿಕದ ಫೆಡರಲ್‌ ರಿಸರ್ವ್‌ನಿಂದ ಬಡ್ಡಿ ದರ ಕಡಿತದ ನಿರೀಕ್ಷೆ ಹೆಚ್ಚಳ ಮತ್ತು ವಿದೇಶಿ ಬಂಡವಾಳದ ಒಳಹರಿವಿನಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಏರಿಕೆ ಕಂಡಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

‘ದೇಶದ ಷೇರುಪೇಟೆ ಸೂಚ್ಯಂಕಗಳು ಗುರುವಾರದ ವಹಿವಾಟಿನ ವೇಳೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದ್ದವು. ಆದರೆ, ಹೂಡಿಕೆದಾರರು ಲಾಭದ ಗಳಿಕೆಗಾಗಿ ಷೇರುಗಳ ಮಾರಾಟಕ್ಕೆ ಮುಂದಾಗಿದ್ದರಿಂದ ಆರಂಭಿಕ ಏರಿಕೆಯ ಮಟ್ಟವನ್ನು ಕಾಯ್ದುಕೊಳ್ಳಲಾಗಲಿಲ್ಲ’ ಎಂದು ಜಿಯೋಜಿತ್ ಇನ್ವೆಸ್ಟ್‌ಮೆಂಟ್‌ ಲಿಮಿಟೆಡ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರದ ವಹಿವಾಟಿನಲ್ಲಿ ₹4,778 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲ ದರವು ಶೇ 0.05ರಷ್ಟು ಇಳಿದಿದೆ. ಪ್ರತೀ ಬ್ಯಾರಲ್ ದರವು 63.10 ಡಾಲರ್ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.