
ನವದೆಹಲಿ: ದೇಶದ ಅರ್ಥವ್ಯವಸ್ಥೆಯು ಉತ್ತಮ ರೀತಿಯಲ್ಲಿ ಬೆಳವಣಿಗೆ ಕಾಣುತ್ತಿರುವ ಹಿನ್ನೆಯಲ್ಲಿ 2026ರಲ್ಲಿ ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ಪ್ರಮಾಣವು ಚೆನ್ನಾಗಿ ಇರಲಿದೆ ಎಂಬ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ.
2024–25ರಲ್ಲಿ ಭಾರತಕ್ಕೆ ಹರಿದುಬಂದಿದ್ದ ಒಟ್ಟು ಎಫ್‌ಡಿಐ ಮೊತ್ತವು 80.5 ಬಿಲಿಯನ್ ಡಾಲರ್ ಆಗಿತ್ತು (ಇಂದಿನ ಅಂದಾಜು ₹7.22 ಲಕ್ಷ ಕೋಟಿ). ಜಾಗತಿಕ ಮಟ್ಟದಲ್ಲಿನ ಅನಿಶ್ಚಿತತೆಗಳ ನಡುವೆಯೂ ಈ ಮಟ್ಟದ ಹೂಡಿಕೆ ಭಾರತಕ್ಕೆ ಬಂದಿತ್ತು.
ಕೇಂದ್ರ ಸರ್ಕಾರ ಕೈಗೊಂಡ ಹಲವು ಕ್ರಮಗಳ ಪರಿಣಾಮವಾಗಿ ಕಳೆದ ಹನ್ನೊಂದು ವರ್ಷಗಳಲ್ಲಿ ಭಾರತವು ಗಮನಾರ್ಹ ಮೊತ್ತದ ಹೂಡಿಕೆಯನ್ನು ಆಕರ್ಷಿಸಿದೆ ಎಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನಾ ಇಲಾಖೆ (ಡಿಪಿಐಐಟಿ) ಕಾರ್ಯದರ್ಶಿ ಅಮರದೀಪ್ ಸಿಂಗ್ ಭಾಟಿಯಾ ಹೇಳಿದ್ದಾರೆ.
‘ಈ ವರ್ಷದಲ್ಲಿ (2026ರಲ್ಲಿ) ವಿದೇಶಿ ನೇರ ಹೂಡಿಕೆಯ ಮೊತ್ತವು 2024–25ರ ಮೊತ್ತವನ್ನು ಮೀರಬಹುದು ಎಂಬ ಆಶಾಭಾವನೆ ನಮಗೆ ಇದೆ’ ಎಂದು ಸಿಂಗ್ ಹೇಳಿದ್ದಾರೆ.
ನಾಲ್ಕು ದೇಶಗಳ ಐರೋಪ್ಯ ಮುಕ್ತ ವ್ಯಾಪಾರ ಒಕ್ಕೂಟ (ಇಎಫ್‌ಟಿಎ) ಜೊತೆ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಕೂಡ ಎಫ್‌ಡಿಐ ಆಕರ್ಷಿಸಲು ನೆರವಾಗುತ್ತದೆ ಎಂದು ಕೇಂದ್ರ ನಂಬಿದೆ.
ಅಂತರರಾಷ್ಟ್ರೀಯ ಮಟ್ಟದ ಕೆಲವು ಸಂಸ್ಥೆಗಳು ಸಿದ್ಧಪಡಿಸಿರುವ ವರದಿಗಳು ಕೂಡ ಭಾರತಕ್ಕೆ ಎಫ್‌ಡಿಐ ಹರಿದುಬರುವ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆಯನ್ನು ಹೇಳಿವೆ.
ದೇಶದಲ್ಲಿ ಎ.ಐ. ಮೂಲಸೌಕರ್ಯ ನಿರ್ಮಾಣಕ್ಕಾಗಿ ಮೈಕ್ರೊಸಾಫ್ಟ್, ಗ್ರಾಹಕ ಬಳಕೆ ವಸ್ತುಗಳನ್ನು ಮನೆಬಾಗಿಲಿಗೆ ತ್ವರಿತವಾಗಿ ತಲುಪಿಸುವ ಹಾಗೂ ಎ.ಐ. ಮೂಲಸೌಕರ್ಯದ ಅಭಿವೃದ್ಧಿಗಾಗಿ ಅಮೆಜಾನ್, ಎ.ಐ. ದತ್ತಾಂಶ ಕೇಂದ್ರ ನಿರ್ಮಾಣಕ್ಕಾಗಿ ಗೂಗಲ್ ಭಾರಿ ಪ್ರಮಾಣದ ಹೂಡಿಕೆ ಮಾಡುವ ಘೋಷಣೆಯನ್ನು ಈಗಾಗಲೇ ಮಾಡಿವೆ.
ಐಫೋನ್ ತಯಾರಿಕಾ ಕಂಪನಿ ಆ್ಯಪಲ್ ಭಾರತದಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸುತ್ತಿದೆ. ದಕ್ಷಿಣ ಕೊರಿಯಾ ದೇಶದ ಸ್ಯಾಮ್ಸಂಗ್ ಕೂಡ ಭಾರತದಲ್ಲಿ ತನ್ನ ತಯಾರಿಕಾ ಘಟಕಗಳ ಸಾಮರ್ಥ್ಯ ಹೆಚ್ಚಿಸುತ್ತಿದೆ.
ದೇಶದ ಅರ್ಥವ್ಯವಸ್ಥೆಯ ಮೂಲಭೂತ ಅಂಶಗಳು ಗಟ್ಟಿಯಾಗಿ ಇರುವ ಕಾರಣದಿಂದಾಗಿ, ಸುಧಾರಣಾ ಕ್ರಮಗಳು ನಿರಂತರವಾಗಿ ಜಾರಿಗೆ ಬರುತ್ತಿರುವ ಪರಿಣಾಮವಾಗಿ 2026ರಲ್ಲಿ ಎಫ್‌ಡಿಐ ದೊಡ್ಡ ಮಟ್ಟದಲ್ಲಿ ಹೆಚ್ಚಳ ಕಾಣಲಿದೆ ಎಂದು ತಜ್ಞರು ಕೂಡ ಅಂದಾಜಿಸಿದ್ದಾರೆ.
‘ಜಾಗತಿಕ ಮಟ್ಟದಲ್ಲಿನ ಅನಿಶ್ಚಿತತೆಗಳ ನಡುವೆ ದೇಶವು ತನ್ನ ಆರ್ಥಿಕ ಸಂಬಂಧಗಳನ್ನು ವಿಸ್ತರಿಸಿಕೊಳ್ಳುತ್ತಿದೆ. ತಯಾರಿಕೆ ಮತ್ತು ಸೇವಾ ವಲಯಗಳಲ್ಲಿ ಸಾಮರ್ಥ್ಯ ಹೆಚ್ಚು ಮಾಡಿಕೊಳ್ಳುತ್ತಿದೆ. ಇವೆಲ್ಲವೂ ಎಫ್‌ಡಿಐ ಹೆಚ್ಚಳಕ್ಕೆ ನೆರವಾಗಲಿವೆ’ ಎಂದು ಡೆಲಾಯ್ಟ್ ಇಂಡಿಯಾದ ಅರ್ಥಶಾಸ್ತ್ರಜ್ಞರಾದ ರುಮ್ಕಿ ಮಜುಂದಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.