ADVERTISEMENT

ತೈಲ ಉತ್ಪಾದನೆ ಕಡಿತ ಮೂಡದ ಒಮ್ಮತ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 2:18 IST
Last Updated 12 ಏಪ್ರಿಲ್ 2020, 2:18 IST
crude oil
crude oil   

ರಿಯುಧ್‌: ಕಚ್ಚಾ ತೈಲ ಉತ್ಪಾದನೆ ಕಡಿತಗೊಳಿಸುವ ಕುರಿತು ಅಂತಿಮ ನಿರ್ಧಾರಕ್ಕೆ ಬರಲು ತೈಲ ಉತ್ಪಾದನಾ ದೇಶಗಳಿಗೆ ಸಾಧ್ಯವಾಗಿಲ್ಲ.

ಈ ಕುರಿತು ಶುಕ್ರವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ನಡೆದ ಜಿ20 ಇಂಧನ ಸಚಿವರ ಸಭೆಯಲ್ಲಿ ಸಹಮತ ಮೂಡಿಲ್ಲ. ಉತ್ಪಾದನೆ ಕಡಿತಗೊಳಿಸುವ ಯಾವುದೇ ಮಾತುಕತೆಯೂ ನಡೆದಿಲ್ಲ. ಅದಕ್ಕೆ ಬದಲಾಗಿ, ಕೊರೊನಾ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಸ್ಥಿರತೆ ಸಾಧಿಸುವ ಕುರಿತು ವಾಗ್ದಾನ ಕೈಗೊಳ್ಳಲಾಯಿತು.

ಕೋವಿಡ್‌–19 ಪರಿಣಾಮಗಳಿಂದ ಹೊರಬರಲು ಮತ್ತು ಜಾಗತಿಕ ಮಾರುಕಟ್ಟೆಯ ಚೇತರಿಕೆಗೆ ಇಂಧನ ವಲಯವು ತನ್ನ ಸಂಪೂರ್ಣ ಮತ್ತು ಪರಿಣಾಮಕಾರಿಯಾದ ಕೊಡುಗೆಯನ್ನು ಮುಂದುವರಿಲು ಬದ್ಧವಾಗಿದೆ ಎಂದು ಶನಿವಾರ ಹೊರಡಿಸಿರುವ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ADVERTISEMENT

ತೈಲ ಮಾರುಕಟ್ಟೆಯ ಸ್ಥಿರತೆಗೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನೂ ತೆಗೆದುಕೊಳ್ಳಲಾಗುವುದು. ವಿಶ್ವದಲ್ಲಿ ಅತಿ ಹೆಚ್ಚು ತೈಲ ಉತ್ಪಾದಿಸುವ ನಾಲ್ಕನೇ ದೇಶವಾಗಿರುವ ಕೆನಡಾ, ಎಷ್ಟು ಪ್ರಮಾಣದಲ್ಲಿ ಉತ್ಪಾದನೆ ಕಡಿತಗೊಳಿಸಲಿದೆ ಎನ್ನುವುದನ್ನು ತಿಳಿಸಿಲ್ಲ. ಈ ಬಗ್ಗೆ ಜಿ20 ಸಮ್ಮಿತ್‌ನಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದೂ ಹೇಳಿದೆ.

‘ಪೂರೈಕೆ ಯಥೇಚ್ಚವಾಗಿರುವುದರಿಂದ ಮೇ ಅಂತ್ಯದ ವೇಳೆಗೆ ಜಾಗತಿಕ ತೈಲ ಸಂಗ್ರಹ ಸಾಮರ್ಥ್ಯ ಮಿತಿಮೀರುವ ಸಾಧ್ಯತೆ ಇದೆ’ ಎಂದು ಒಪೆಕ್‌ನ ಪ್ರಧಾನ ಕಾರ್ಯದರ್ಶಿ ಮಹಮ್ಮದ್‌ ಬರ್ಕಿಂಡೊ ಎಚ್ಚರಿಕೆ ನೀಡಿದ್ದಾರೆ.

ರಷ್ಯಾ ನೆರವಿಗೆ ಅಮೆರಿಕ

ವಾಷಿಂಗ್ಟನ್‌: ತೈಲ ಉತ್ಪಾದನೆ ಕಡಿತಕ್ಕೆ ಸಂಬಂಧಿಸಿದಂತೆ ರಷ್ಯಾಗೆ ನೆರವಾಗಲು ಅಮೆರಿಕ ನಿರ್ಧರಿಸಿದೆ.

‘ರಷ್ಯಾವು ದಿನಕ್ಕೆ 1 ಲಕ್ಷ ಬ್ಯಾರಲ್‌ ಉತ್ಪಾದನೆ ಕಡಿತಗೊಳಿಸಲಿದೆ. ಆದರೆ ಇದು ಜಾಗತಿಕ ಒಪ್ಪಂದಕ್ಕಿಂತಲೂ 2.5 ಲಕ್ಷ ಬ್ಯಾರಲ್‌ಗಳಿಂದ 3 ಲಕ್ಷ ಬ್ಯಾರಲ್‌ಗಳಷ್ಟು ಕೊರತೆ ಬೀಳಲಿದೆ. ಸದ್ಯದ ಮಟ್ಟಿಗೆ ಈ ಕೊರತೆಯನ್ನು ಅಮೆರಿಕ ತುಂಬಿಕೊಡಲಿದೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಿಳಿಸಿದ್ದಾರೆ.

ಸ್ಥಿರತೆಗೆ ಭಾರತ ಒತ್ತಾಯ

ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವಂತೆ ಭಾರತ ಒತ್ತಾಯಿಸಿದೆ.

ಜಿ20 ದೇಶಗಳ ಸಭೆಯಲ್ಲಿ ಮಾತನಾಡಿದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌, ‘ಜಗತ್ತಿನ ಇಂಧನ ಬೇಡಿಕೆಯ ಚಾಲಕಶಕ್ತಿಯಾಗಿಯೇ ಭಾರತ ಮುಂದುವರಿಯಲಿದೆ’ ಎಂದಿದ್ದಾರೆ.

ಭಾರತವು ಯಾವಾಗಲೂ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಪ್ರತಿಪಾದಿಸುತ್ತದೆ. ಮಾರುಕಟ್ಟೆ ಸ್ಥಿರವಾಗಿದ್ದರೆ ಉತ್ಪಾದಕರಿಗೆನ್ಯಾಯೋಚಿತ ಮತ್ತು ಗ್ರಾಹಕರಿಗೆ ಕೈಗೆಟುಕುವ ದರಕ್ಕೆ ಇಂಧನ ಸಿಗುವಂತಾಗಲಿದೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.