ನವದೆಹಲಿ: 2024–25ನೇ ಮಾರುಕಟ್ಟೆ ವರ್ಷದಲ್ಲಿ (ಅಕ್ಟೋಬರ್–ಸೆಪ್ಟೆಂಬರ್) ಇಲ್ಲಿಯವರೆಗೆ ದೇಶದ ಸಕ್ಕರೆ ಉತ್ಪಾದನೆಯಲ್ಲಿ ಶೇ 17ರಷ್ಟು ಕುಸಿತವಾಗಿದೆ ಎಂದು ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘ (ಐಎಸ್‌ಎಂಎ) ತಿಳಿಸಿದೆ.
ಅಕ್ಟೋಬರ್‌ನಿಂದ ಮಾರುಕಟ್ಟೆ ವರ್ಷ ಶುರುವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 74.05 ಲಕ್ಷ ಟನ್ ಉತ್ಪಾದನೆಯಾಗಿತ್ತು. ಈಗ 61.39 ಲಕ್ಷ ಟನ್ ಉತ್ಪಾದನೆಯಾಗಿದೆ ಎಂದು ವಿವರಿಸಿದೆ.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಅರೆಯುವಿಕೆಯು 7ರಿಂದ 12 ದಿನ ವಿಳಂಬವಾಗಿದೆ. ಮಹಾರಾಷ್ಟ್ರದಲ್ಲಿ 15ರಿಂದ 20 ದಿನ ತಡವಾಗಿದೆ. ಇದೇ ಉತ್ಪಾದನೆ ಕುಸಿತಕ್ಕೆ ಕಾರಣ ಎಂದು ಹೇಳಿದೆ.
ಉತ್ತರ ಪ್ರದೇಶದಲ್ಲಷ್ಟೇ ಉತ್ಪಾದನೆಯಲ್ಲಿ ಏರಿಕೆಯಾಗಿದೆ. ಒಟ್ಟು 23.04 ಲಕ್ಷ ಟನ್ ಉತ್ಪಾದನೆಯಾಗಿದೆ. ಮಹಾರಾಷ್ಟ್ರದಲ್ಲಿ 16.78 ಲಕ್ಷ ಟನ್ ಮತ್ತು ಕರ್ನಾಟಕದಲ್ಲಿ 13.85 ಲಕ್ಷ ಟನ್ ಉತ್ಪಾದನೆಯಾಗಿದೆ.
ಕಳೆದ ವರ್ಷ ಕಬ್ಬಿನ ಹಾಲು ಹಾಗೂ ಮೊಲಾಸಿಸ್–ಬಿ (ಕಾಕಂಬಿ) ಬಳಸಿ ಎಥೆನಾಲ್ ತಯಾರಿಕೆಗೆ 21.5 ಲಕ್ಷ ಟನ್ ಸಕ್ಕರೆ ಬಳಸಲು ಮಿತಿ ನಿಗದಿಪಡಿಸಲಾಗಿತ್ತು. ಈ ಬಾರಿ 40 ಲಕ್ಷ ಟನ್ ಬಳಕೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.