ತುಮಕೂರು: ಮಾರುಕಟ್ಟೆಯಲ್ಲಿ ಹುಣಸೆ ಹಣ್ಣಿನ ಧಾರಣೆ ವಾರದಿಂದ ವಾರಕ್ಕೆ ಏರುಗತಿಯಲ್ಲೇ ಸಾಗಿದ್ದು, ಅದರ ಬೀಜಕ್ಕೂ ಶುಕ್ರದೆಸೆ ಆರಂಭವಾಗಿದೆ.
ಹುಣಸೆ ಹಣ್ಣಿನಂತೆ ಬೀಜವೂ ಬೇಡಿಕೆ ಕಂಡುಕೊಂಡಿದ್ದು, ಉತ್ತಮ ಬೆಲೆ ಸಿಗುತ್ತಿದೆ. ರಾಗಿ, ಇತರೆ ಕೆಲವು ಧಾನ್ಯಗಳಿಗಿಂತ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ.
ತುಮಕೂರು ಎಪಿಎಂಸಿಯಲ್ಲಿ ಹುಣಸೆ ಬೀಜದ ದರ ಕ್ವಿಂಟಲ್ ₹3,700ಕ್ಕೆ ಏರಿಕೆಯಾಗಿದೆ. ಹಿಂದಿನ ಎರಡು ವಾರದ ಹಿಂದೆ ಕ್ವಿಂಟಲ್ ₹2,800 ಆಸುಪಾಸಿನಲ್ಲಿ ಇತ್ತು.
ಎರಡು ವಾರಗಳ ಅಂತರದಲ್ಲಿ ಕ್ವಿಂಟಲ್‌ಗೆ ₹900 ಹೆಚ್ಚಳವಾಗಿದೆ. ಬೆಳೆಗಾರರಿಗೆ ಹಣ್ಣು, ಬೀಜ ಎರಡರಿಂದಲೂ ಉತ್ತಮ ಬೆಲೆ ಸಿಗುತ್ತಿದೆ. ಕಳೆದ ವರ್ಷ ಕ್ವಿಂಟಲ್‌ಗೆ ₹4 ಸಾವಿರದವರೆಗೂ ಏರಿಕೆಯಾಗಿ, ಅಂತಿಮವಾಗಿ ₹3 ಸಾವಿರಕ್ಕೆ ಇಳಿದಿತ್ತು. 2023ರ ಡಿಸೆಂಬರ್‌ನಲ್ಲಿ ಕೆಲ ದಿನಗಳವರೆಗೆ ಕ್ವಿಂಟಲ್‌ಗೆ ₹5 ಸಾವಿರಕ್ಕೆ ಮುಟ್ಟಿತ್ತು.
ಪ್ರಸ್ತುತ ಮಾರುಕಟ್ಟೆಗೆ ಪ್ರತಿ ದಿನವೂ ಸರಾಸರಿ 2 ಸಾವಿರ ಚೀಲ (ಪ್ರತಿ ಚೀಲದಲ್ಲಿ 60 ಕೆ.ಜಿ) ಬೀಜ ಬರುತ್ತಿದೆ. ಮುಂದಿನ ದಿನಗಳಲ್ಲಿ ಆವಕ ಮತ್ತಷ್ಟು ಹೆಚ್ಚಳವಾಗಬಹುದು ಎಂದು ವರ್ತಕ ಎಚ್.ಪಿ. ದೇವೇಂದ್ರಪ್ಪ ಹೇಳುತ್ತಾರೆ.
ಬೀಜದ ಮೇಲಿನ ಕಪ್ಪು ಸಿಪ್ಪೆಯನ್ನು ಬೇರ್ಪಡಿಸಿ, ನಂತರ ಉಳಿಯುವ ಬಿಳಿ ಭಾಗದ ಬೀಜವನ್ನು ಪೌಡರ್ ಮಾಡಿ (ಮೈದ ಹಿಟ್ಟಿನ ಮಾದರಿ) ನಂತರ ಬಳಕೆ ಮಾಡಲಾಗುತ್ತದೆ. ಈ ಪೌಡರ್‌ನಿಂದ ಗಂಜಿ ಸಿದ್ಧಪಡಿಸಿ ಬಟ್ಟೆ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಸೊಳ್ಳೆ ಬತ್ತಿ, ಮತ್ತಿತರ ಉತ್ಪನ್ನಗಳ ತಯಾರಿಕೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ.
ವರ್ತಕರು ನೇರವಾಗಿ ಮಾರುಕಟ್ಟೆಗೆ ಬಂದು ಬೀಜ ಖರೀದಿಸುವುದಿಲ್ಲ. ಸ್ಥಳೀಯ ವ್ಯಾಪಾರಿಗಳ ಮೂಲಕ ಬೆಲೆ ಗೊತ್ತುಪಡಿಸಿಕೊಂಡು ಅಗತ್ಯದಷ್ಟು ತರಿಸಿಕೊಳ್ಳುತ್ತಾರೆ. ಈ ಭಾಗದ ಬೀಜ ಪ್ರಮುಖವಾಗಿ ದಾಬಸ್‌ಪೇಟೆ ಬಳಿ ಇರುವ ಕಾರ್ಖಾನೆಗೆ ರವಾನೆಯಾಗುತ್ತದೆ. ಗುಜರಾತ್ ಸೇರಿದಂತೆ ಬಟ್ಟೆ ಉತ್ಪಾದಿಸುವ ರಾಜ್ಯಗಳು ಹಾಗೂ ಸೊಳ್ಳೆ ನಿಯಂತ್ರಿಸುವ ಉತ್ಪನ್ನಗಳನ್ನು ತಯಾರಿಸುವ ಉದ್ಯಮಗಳಲ್ಲಿ ಹೆಚ್ಚು ಬೇಡಿಕೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.