ADVERTISEMENT

ಸಿಂಗೂರು ನ್ಯಾನೊ ಕಾರು ಘಟಕ ವಿವಾದ: ಟಾಟಾ ಮೋಟರ್ಸ್‌ಗೆ ₹766 ಕೋಟಿ ಪರಿಹಾರ

ಪಶ್ಚಿಮ ಬಂಗಾಳ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ (ಡಬ್ಲ್ಯುಬಿಐಡಿಸಿ) ಮಧ್ಯಸ್ಥಿಕೆ ನ್ಯಾಯಮಂಡಳಿ ಸೂಚನೆ ನೀಡಿದೆ

ಪಿಟಿಐ
Published 31 ಅಕ್ಟೋಬರ್ 2023, 6:16 IST
Last Updated 31 ಅಕ್ಟೋಬರ್ 2023, 6:16 IST
ಸಾಂಕೇತಕ ಚಿತ್ರ
ಸಾಂಕೇತಕ ಚಿತ್ರ   

ನವದೆಹಲಿ: ಸಿಂಗೂರಿನಲ್ಲಿ ನ್ಯಾನೊ ಕಾರು ತಯಾರಿಕಾ ಘಟಕ ಸ್ಥಾಪನೆ ಸ್ಥಗಿತಗೊಂಡಿದ್ದಕ್ಕಾಗಿ ಟಾಟಾ ಮೋಟರ್ಸ್‌ಗೆ ₹766 ಕೋಟಿ ಪರಿಹಾರ ನೀಡುವಂತೆ ಮಧ್ಯಸ್ಥಿಕೆ ನ್ಯಾಯಮಂಡಳಿಯು ಪಶ್ಚಿಮ ಬಂಗಾಳ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ (ಡಬ್ಲ್ಯುಬಿಐಡಿಸಿ) ಸೂಚನೆ ನೀಡಿದೆ.

ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ನ್ಯಾನೊ ಘಟಕಕ್ಕೆ ಸ್ಥಾಪನೆಗೆ ತೃಣಮೂಲಕ ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಬಲವಂತದಿಂದ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿತ್ತು. ಇದರಿಂದಾಗಿ ಅಲ್ಲಿ ಘಟಕ ಸ್ಥಾಪನೆಯನ್ನು ಕಂಪನಿ ಕೈಬಿಟ್ಟಿಟ್ಟು, 2008 ರ ಅಕ್ಟೋಬರ್‌ನಲ್ಲಿ ಗುಜರಾತ್‌ನ ಸಾನಂದದಲ್ಲಿ ಘಟಕ ಸ್ಥಾಪಿಸಿತು. ಆದರೆ ಅದಾಗಲೇ ಸಿಂಗೂರು ಘಟಕಕ್ಕಾಗಿ ಕಂಪನಿಯು ₹1 ಸಾವಿರ ಕೋಟಿ ಹೂಡಿಕೆ ಮಾಡಿತ್ತು.

ಘಟಕ ಸ್ಥಾಪನೆಗಾಗಿ ಬಂಡವಾಳ ಹೂಡಿಕೆ ಮಾಡಿದ್ದರಿಂದ ಆಗಿರುವ ನಷ್ಟವನ್ನೂ ಒಳಗೊಂಡು ಹಲವು ಕಾರಣಗಳನ್ನು ಇಟ್ಟುಕೊಂಡು ಟಾಟಾ ಮೋಟರ್ಸ್‌ ಕಂಪನಿಯು ಪರಿಹಾರಕ್ಕಾಗಿ ಮಧ್ಯಸ್ಥಿಕೆ ನ್ಯಾಯಮಂಡಳಿಯ ಮೆಟ್ಟಿಲೇರಿತ್ತು.

ADVERTISEMENT

2016ರ ಸೆಪ್ಟೆಂಬರ್ 1ರಿಂದ ಈವರೆಗೆ ವಾರ್ಷಿಕ ಶೇ 11ರಷ್ಟು ಬಡ್ಡಿಯ ಜೊತೆಗೆ ₹765.78 ಕೋಟಿ ಪರಿಹಾರ ನೀಡುವಂತೆ ಈ ನ್ಯಾಯಮಂಡಳಿಯು ಸೋಮವಾರ ತೀರ್ಪು ನೀಡಿರುವುದಾಗಿ ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.