ADVERTISEMENT

ಟಾಟಾ ಆಲ್ಟ್ರೋಜ್ ಜನವರಿಯಲ್ಲಿ ಮಾರುಕಟ್ಟೆಗೆ

ಬಿ.ಎಂ.ಹನೀಫ್
Published 9 ಡಿಸೆಂಬರ್ 2019, 20:00 IST
Last Updated 9 ಡಿಸೆಂಬರ್ 2019, 20:00 IST
ಟಾಟಾ ಆಲ್ಟ್ರೋಜ್
ಟಾಟಾ ಆಲ್ಟ್ರೋಜ್   

ಬೆಂಗಳೂರು: ಕಾರು ಮಾರುಕಟ್ಟೆಯ ಹಿನ್ನಡೆ ಟಾಟಾ ಮೋಟಾರ್ಸ್ ಕಂಪನಿಯ ಉತ್ಸಾಹವನ್ನು ಕುಗ್ಗಿಸಿಲ್ಲ. ಟಾಟಾ ಮೋಟಾರ್ಸ್‍ನ ಹೊಸ ಕಾರು ಆಲ್ಟ್ರೋಜ್ ಜನವರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ರಾಜಸ್ತಾನದ ಜೈಸಲ್ಮೇರ್‍ನಲ್ಲಿ ಕಳೆದ ವಾರ ಆಲ್ಟ್ರೋಜ್‍ನ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ಮಾಧ್ಯಮದವರ ಮುಂದೆ ಪ್ರದರ್ಶಿಸಲಾಯಿತು. ಪತ್ರಕರ್ತರು ಟೆಸ್ಟ್‌ಡ್ರೈವ್ ಮಾಡಿ ಕಾರುಗಳನ್ನು ಪರೀಕ್ಷಿಸಿದರು.

ಮಾರುಕಟ್ಟೆಯಲ್ಲಿ ಹ್ಯುಂಡೈ ಮೋಟರ್ಸ್‍ನ ಐ20 ಮತ್ತು ಮಾರುತಿ-ಸುಜುಕಿ ಕಂಪನಿಯ ಬೆಲೆನೊಗೆ ಪ್ರತಿಸ್ಪರ್ಧೆ ಒಡ್ಡಲು ಟಾಟಾ ಈ ಕಾರುಗಳನ್ನು ಹೊರತಂದಿದೆ. 1199 ಸಿಸಿ ಸಾಮರ್ಥ್ಯದ, ಭಾರತ್ ಸ್ಟೇಜ್ 6 ಎಂಜಿನ್ ಹೊಂದಿರುವ ಆಲ್ಟ್ರೋಜ್, 2020ರಲ್ಲಿ ಟಾಟಾ ಮೋಟರ್ಸ್‍ಗೆ ಕಾರು ಮಾರುಕಟ್ಟೆಯಲ್ಲಿ ಮಹತ್ವದ ಸ್ಥಾನ ಒದಗಿಸುವ ನಿರೀಕ್ಷೆ ಇದೆ.

ADVERTISEMENT

ಟಾಟಾ ಮೋಟರ್ಸ್‍ನ ಪ್ರಯಾಣಿಕ ಕಾರು ವಿಭಾಗದ ಅಧ್ಯಕ್ಷ ಮಯಾಂಕ್ ಪಾರೀಕ್ ಪ್ರಕಾರ, ಮುಂದಿನ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಾರುಗಳ ಮಾರಾಟ ಏರಿಕೆಯಾಗುವ ನಿರೀಕ್ಷೆ ಇದೆ. ‘ಸದ್ಯಕ್ಕೆ ಭಾರತದಲ್ಲಿ 1000 ಜನರಲ್ಲಿ 29 ಜನರು ಮಾತ್ರ ಕಾರುಗಳನ್ನು ಹೊಂದಿದ್ದಾರೆ. ಹಿಂದೆಲ್ಲ ನಿವೃತ್ತಿಯ ಹೊತ್ತಿಗೆ ಕಾರುಗಳನ್ನು ಖರೀದಿಸುವ ಪ್ರವೃತ್ತಿ ಇತ್ತು. ಆದರೆ ಈಗ ಮಿಲೆನಿಯಲ್‍ಗಳ ಕಾಲದಲ್ಲಿ ಉದ್ಯೋಗ ದೊರೆತ ಆರಂಭದಲ್ಲೇ ಕಾರು ಖರೀದಿಸುವ ಪ್ರವೃತ್ತಿ ಬೆಳೆಯುತ್ತಿದೆ. ಮುಂದಿನ ವರ್ಷ ಆಟೊಮೊಬೈಲ್ ಉದ್ಯಮ ನಿಧಾನಕ್ಕೆ ಚೇತರಿಕೆ ಕಾಣಲಿದೆ’ ಎಂದು ಅವರು ಹೇಳಿದರು.

ಹೊಸ ಆಲ್ಟ್ರೋಜ್ ಕಾರಿನ ಸ್ಟೈಲಿಷ್ ಡಿಸೈನ್ ಮತ್ತು ಸಂಪೂರ್ಣ ಸುರಕ್ಷತಾ ಮಾನದಂಡಗಳು ಹೆಚ್ಚಿನ ಗ್ರಾಹಕರನ್ನು ಸೆಳೆಯಲಿವೆ ಎಂದು ಮಯಾಂಕ್ ಪಾರೀಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ‘ಈ ವಿಭಾಗದಲ್ಲಿ ಇದು ಅತ್ಯಂತ ಸುರಕ್ಷಿತ ಕಾರು. ಸಂಪೂರ್ಣ ಡಿಜಿಟಲ್ ತಂತ್ರಜ್ಞಾನಕ್ಕೆ ಒತ್ತು ಕೊಡಲಾಗಿದೆ. ಭಾರತದಲ್ಲಿ ಆಲ್ಫಾ ಆರ್ಟಿಟೆಕ್ಚರ್ ವಿನ್ಯಾಸದ ಮೊದಲ ಕಾರು ಇದು. ಎಲ್ಲ ವಿಧದಲ್ಲೂ ಜಾಗತಿಕ ಗುಣಮಟ್ಟವನ್ನು ಈ ಕಾರಿನಲ್ಲಿ ಸಾಧಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.

ಆಲ್ಟ್ರೋಜ್ ಕಾರಿನ ಬೆಲೆಯನ್ನು ಇನ್ನೂ ನಿಗದಿ ಪಡಿಸಲಾಗಿಲ್ಲ. ಕಾರು ಮಾರುಕಟ್ಟೆಯಲ್ಲಿ ಸದಾ ಬೆಲೆ ಸಮರದಲ್ಲಿ ಮುಂದಿರುವ ಟಾಟಾ ಮೋಟರ್ಸ್, ಪ್ರತಿಸ್ಪರ್ಧಿ ಕಾರುಗಳಿಗಿಂತ ಸ್ವಲ್ಪ ಕಡಿಮೆ ಬೆಲೆಯನ್ನೇ ನಿಗದಿ ಮಾಡುವ ನಿರೀಕ್ಷೆ ಇದೆ. ಈ ಬಗ್ಗೆ ಪ್ರಶ್ನಿಸಿದಾಗ, ‘ಜಾಗತಿಕ ಗುಣಮಟ್ಟದ ಕಾರು ನಮ್ಮದು. ಬೆಲೆ ಅದಕ್ಕೆ ತಕ್ಕಂತೆಯೇ ಇರುತ್ತದೆ’ ಎಂದರು. ‘₹ 4,99 ಲಕ್ಷದಿಂದ ₹ 8.99 ಲಕ್ಷದ ಮಧ್ಯೆ ಬೆಲೆ ನಿಗದಿಯಾಗಬಹುದು ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ. ಸದ್ಯಕ್ಕೆ ಕಾರಿನ ಮೈಲೇಜ್ ಬಗ್ಗೆಯೂ ಕಂಪೆನಿಯು ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ.

2018ರ ದೆಹಲಿ ಆಟೊ ಎಕ್ಸ್‌ಪೋದಲ್ಲಿ, ಪ್ರೀಮಿಯಂ ಹ್ಯಾಚ್‍ಬ್ಯಾಕ್ ಕಾರುಗಳನ್ನು ಮಾರುಕಟ್ಟೆಗೆ ತರುವುದಾಗಿ ಟಾಟಾ ಮೋಟರ್ಸ್ ಪ್ರಕಟಿಸಿತ್ತು. ಸಂಸ್ಥೆಯ ಪುಣೆಯ ತಯಾರಿಕಾ ಘಟಕದಲ್ಲಿ ಕಾರುಗಳು ಸಿದ್ಧವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.