ADVERTISEMENT

ಏರ್‌ ಇಂಡಿಯಾ ಖರೀದಿಗೆ ಟಾಟಾ ಸಮೂಹ ಆಸಕ್ತಿ

ಪಿಟಿಐ
Published 15 ಡಿಸೆಂಬರ್ 2020, 1:11 IST
Last Updated 15 ಡಿಸೆಂಬರ್ 2020, 1:11 IST
ಟಾಟಾ ಕಂಪನಿ ಲೋಗೊ
ಟಾಟಾ ಕಂಪನಿ ಲೋಗೊ   

ನವದೆಹಲಿ: ಸರಿಸುಮಾರು ಏಳು ದಶಕಗಳ ನಂತರ ಟಾಟಾ ಸಮೂಹವು ಏರ್‌ ಇಂಡಿಯಾ ಕಂಪನಿಯನ್ನು ಮತ್ತೆ ತನ್ನದಾಗಿಸಿಕೊಳ್ಳುವ ಯತ್ನದಲ್ಲಿ ಇದೆ. ಟಾಟಾ ಸನ್ಸ್ ಕಂಪನಿಯು ಏರ್‌ ಇಂಡಿಯಾ ಬಿಡ್ಡಿಂಗ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಬಿಡ್ಡಿಂಗ್‌ಗೆ ಆಸಕ್ತಿ ತೋರಿಸಿ ಅರ್ಜಿ ಸಲ್ಲಿಸಲು ಸೋಮವಾರ ಕಡೆಯ ದಿನ. ಪ್ರಸ್ತುತ, ಟಾಟಾ ಸಮೂಹವು ವಿಸ್ತಾರಾ ಮತ್ತು ಏರ್‌ ಏಷ್ಯಾ ಇಂಡಿಯಾ ವಿಮಾನಯಾನ ಕಂಪನಿಗಳನ್ನು ನಡೆಸುತ್ತಿದೆ.

ಏರ್‌ ಇಂಡಿಯಾ ಕಂಪನಿಯನ್ನು ಖಾಸಗಿಯವರ ಕೈಗೆ ಒಪ್ಪಿಸಲು ಕೇಂದ್ರ ಸರ್ಕಾರವು ಒಂದು ಬಾರಿ ಈಗಾಗಲೇ ಯತ್ನಿಸಿದೆ. ಆದರೆ ಆ ಯತ್ನಕ್ಕೆ ಫಲ ಸಿಕ್ಕಿಲ್ಲ. ಹೀಗಿದ್ದರೂ, ಸರ್ಕಾರವು ಏರ್‌ ಇಂಡಿಯಾದಲ್ಲಿ ತಾನು ಹೊಂದಿರುವ ಷೇರು ಪಾಲನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆಯನ್ನು ಈ ವರ್ಷದ ಆರಂಭದಲ್ಲಿ ಮತ್ತೆ ಆರಂಭಿಸಿದೆ.

ADVERTISEMENT

ಟಾಟಾ ಸನ್ಸ್ ಕಂಪನಿಯು ಏರ್‌ ಇಂಡಿಯಾ ಕಂಪನಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಆಸಕ್ತಿ ಹೊಂದಿದೆ ಎಂದು ಮೂಲಗಳು ಖಚಿತಪಡಿಸಿವೆ. ಟಾಟಾ ಸಮೂಹದ ಕಂಪನಿಗಳ ಪ್ರವರ್ತಕ ಕಂಪನಿ ಟಾಟಾ ಸನ್ಸ್. ಏರ್‌ ಇಂಡಿಯಾ ಕಂಪನಿ ಖರೀದಿಸುವ ಯತ್ನವನ್ನು ಏಕಾಂಗಿಯಾಗಿ ನಡೆಸಬೇಕೇ ಅಥವಾ ಪಾಲುದಾರರ ಜೊತೆ ಸೇರಿ ಮಾಡಬೇಕೇ ಎಂಬ ಬಗ್ಗೆ ಟಾಟಾ ಸನ್ಸ್ ಇನ್ನೂ ತೀರ್ಮಾನಿಸಿಲ್ಲ ಎಂದು ಗೊತ್ತಾಗಿದೆ.

ಈ ಬಗ್ಗೆ ಪ್ರತಿ‌ಕ್ರಿಯೆ ನೀಡಲು ಟಾಟಾ ಸನ್ಸ್ ವಕ್ತಾರ ನಿರಾಕರಿಸಿದ್ದಾರೆ. ಏರ್ ಏಷ್ಯಾ ಇಂಡಿಯಾ ವಕ್ತಾರರು ಕೂಡ ಪ್ರತಿಕ್ರಿಯೆಗೆ ನಿರಾಕರಿಸಿದರು. ಇಂದಿನ ಏರ್‌ ಇಂಡಿಯಾ ಕಂಪನಿಯನ್ನು ಮೊದಲು ಆರಂಭಿಸಿದ್ದು ಉದ್ಯಮಿ ಜೆ.ಆರ್‌.ಡಿ. ಟಾಟಾ. ನಂತರ, 1953ರಲ್ಲಿ ಕೇಂದ್ರ ಸರ್ಕಾರವು ಅದರಲ್ಲಿನ ಬಹುಪಾಲು ಷೇರುಗಳನ್ನು ಖರೀದಿಸಿ ಕಂಪನಿಯನ್ನು ತನ್ನದಾಗಿಸಿಕೊಂಡಿತು.

ನೌಕರರಿಂದಲೂ ಅರ್ಜಿ: ಏರ್‌ ಇಂಡಿಯಾದ 209 ನೌಕರರನ್ನು ಪ್ರತಿನಿಧಿಸುವ ಗುಂಪೊಂದು ಕಂಪನಿಯನ್ನು ಖರೀದಿಸಲು ಬಿಡ್ ಸಲ್ಲಿಸಿದೆ ಎಂದು ಕಂಪನಿಯ ವಾಣಿಜ್ಯ ನಿರ್ದೇಶಕ ಮೀನಾಕ್ಷಿ ಮಲ್ಲಿಕ್ ತಿಳಿಸಿದ್ದಾರೆ.

‘ನಾವು ಬಿಡ್ ಅನ್ನು ಸೋಮವಾರ ಸಲ್ಲಿಸಿದ್ದೇವೆ. ಕಂಪನಿಯ ಶೇಕಡ 100ರಷ್ಟು ಷೇರುಗಳ ಖರೀದಿಗೆ ನಾವು ಬಿಡ್ ಸಲ್ಲಿಸಿದ್ದೇವೆ’ ಎಂದು ಮಲ್ಲಿಕ್ ಅವರು ಹೇಳಿದ್ದಾರೆ.

ಸರ್ಕಾರವು ಏರ್‌ ಇಂಡಿಯಾದಲ್ಲಿ ಹೊಂದಿರುವ ಶೇಕಡ 100ರಷ್ಟು ಷೇರುಗಳನ್ನು, ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಕಡಿಮೆ ವೆಚ್ಚದ ವಿಮಾನಯಾನ ಸೇವೆ ಒದಗಿಸುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿನ ಶೇಕಡ 100ರಷ್ಟು ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರವು ಜನವರಿಯಲ್ಲಿ ಬಿಡ್ ಆಹ್ವಾನಿಸಿತ್ತು.

2019ರ ಮಾರ್ಚ್‌ 31ಕ್ಕೆ ಏರ್‌ ಇಂಡಿಯಾ ಸಾಲ ₹ 60,074 ಕೋಟಿ ಆಗಿತ್ತು. ಕಂಪನಿಯನ್ನು ಖರೀದಿಸುವವರು ಈ ಸಾಲದಲ್ಲಿ ₹ 23,286 ಕೋಟಿಯನ್ನು ತಾವು ವಹಿಸಿಕೊಳ್ಳಬೇಕು. ಇನ್ನುಳಿದ ಸಾಲವು ಏರ್‌ ಇಂಡಿಯಾ ಅಸೆಟ್ಸ್ ಹೋಲ್ಡಿಂಗ್ ಲಿ. ಎಂಬ ಕಂಪನಿಗೆ ವರ್ಗಾವಣೆ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.