ADVERTISEMENT

₹ 50,000 ಕೋಟಿಯ ಗಡಿ ದಾಟಿದ ಟಿಸಿಎಸ್‌ ತ್ರೈಮಾಸಿಕ ಆದಾಯ

ಪಿಟಿಐ
Published 11 ಏಪ್ರಿಲ್ 2022, 14:30 IST
Last Updated 11 ಏಪ್ರಿಲ್ 2022, 14:30 IST
   

ಮುಂಬೈ (ಪಿಟಿಐ): ದೇಶದ ಅತಿದೊಡ್ಡ ಸಾಫ್ಟ್‌ವೇರ್‌ ಸೇವಾ ಕಂಪನಿಯಾಗಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌), ಇದೇ ಮೊದಲ ಬಾರಿಗೆ ತ್ರೈಮಾಸಿಕವೊಂದರಲ್ಲಿ ₹ 50 ಸಾವಿರ ಕೋಟಿಗಿಂತ ಹೆಚ್ಚು ಆದಾಯ ಗಳಿಸಿದೆ. ಮಾರ್ಚ್‌ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭದ ಪ್ರಮಾಣವು ಶೇಕಡ 7.4ರಷ್ಟು ಹೆಚ್ಚಾಗಿದ್ದು ₹ 9,926 ಕೋಟಿಗೆ ಏರಿಕೆ ಆಗಿದೆ.

ದೇಶದಲ್ಲಿ ಅತಿಹೆಚ್ಚಿನ ಜನರಿಗೆ (5.92 ಲಕ್ಷ) ಉದ್ಯೋಗ ನೀಡಿರುವ ಖಾಸಗಿ ಕಂಪನಿ ಟಿಸಿಎಸ್. ಇದರ ಉದ್ಯೋಗಿಗಳು 46 ದೇಶಗಳಲ್ಲಿ ಇದ್ದಾರೆ. ಮಾರ್ಚ್ ತ್ರೈಮಾಸಿಕದಲ್ಲಿನ ಆದಾಯವು ₹ 50 ಸಾವಿರ ಕೋಟಿ ದಾಟಿದ ಕಾರಣದಿಂದಾಗಿ ಕಂಪನಿಗೆ ಇಡೀ ಆರ್ಥಿಕ ವರ್ಷದಲ್ಲಿ ಇದೇ ಮೊದಲ ಬಾರಿಗೆ 25 ಬಿಲಿಯನ್ ಡಾಲರ್ (₹ 1.89 ಲಕ್ಷ ಕೋಟಿ) ಆದಾಯದ ಗಡಿ ದಾಟಲು ಸಾಧ್ಯವಾಗಿದೆ.

ಇಡೀ ಆರ್ಥಿಕ ವರ್ಷದಲ್ಲಿ ಕಂಪನಿಯ ನಿವ್ವಳ ಲಾಭವು ಶೇ 14.8ರಷ್ಟು ಏರಿಕೆ ಆಗಿ ₹ 38,327 ಕೋಟಿಗೆ ತಲುಪಿದೆ. ಮಾರ್ಚ್‌ಗೆ ಕೊನೆಗೊಂಡ ವರ್ಷದಲ್ಲಿ ಕಂಪನಿಯು ಹೊಸದಾಗಿ 1.03 ಲಕ್ಷ ಜನರನ್ನು ನೇಮಕ ಮಾಡಿಕೊಂಡಿದೆ. ಒಟ್ಟು 153 ದೇಶಗಳ ಜನ ಟಿಸಿಎಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕಂಪನಿ ಮಾಹಿತಿ ನೀಡಿದೆ. ಒಟ್ಟು ಉದ್ಯೋಗಿಗಳ ಪೈಕಿ ಶೇ 35.6ರಷ್ಟು ಮಂದಿ ಮಹಿಳೆಯರು.

ADVERTISEMENT

ಮಾರ್ಚ್‌ ತ್ರೈಮಾಸಿಕದಲ್ಲಿಯೇ ಒಟ್ಟು 35,209 ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇದು ತ್ರೈಮಾಸಿಕವೊಂದರಲ್ಲಿ ಆಗಿರುವ ಅತಿಹೆಚ್ಚಿನ ನೇಮಕ. ಕಂಪನಿಯನ್ನು ತೊರೆದ ನೌಕರರ ಪ್ರಮಾಣವು ಶೇ 17.4ರಷ್ಟು ಇದೆ. ಷೇರುದಾರರಿಗೆ ಪ್ರತಿ ಷೇರಿಗೆ ಅಂತಿಮ ಲಾಭಾಂಶವಾಗಿ ₹ 22 ಸಿಗಲಿದೆ ಎಂದು ಕಂಪನಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.