ADVERTISEMENT

ಟಿಸಿಎಸ್‌ ಲಾಭ ಶೇ 14ರಷ್ಟು ಇಳಿಕೆ

ಒಂದು ಬಾರಿಯ ವೆಚ್ಚದಿಂದಾಗಿ ಲಾಭ ಕಡಿಮೆ * ಪ್ರತಿ ಷೇರಿಗೆ ₹57 ಲಾಭಾಂಶ ಘೋಷಣೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 16:06 IST
Last Updated 12 ಜನವರಿ 2026, 16:06 IST
ಟಿಸಿಎಸ್‌
ಟಿಸಿಎಸ್‌   

ಮುಂಬೈ: ದೇಶದ ಅತಿದೊಡ್ಡ ಐ.ಟಿ. ಸೇವಾ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್) ಡಿಸೆಂಬರ್‌ ತ್ರೈಮಾಸಿಕದ ಹಣಕಾಸಿನ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದ್ದು, ಕಂಪನಿಯ ಲಾಭವು ಶೇ 13.91ರಷ್ಟು ಕುಸಿದಿದೆ.

ಕಂಪನಿಯು ಈ ತ್ರೈಮಾಸಿಕದಲ್ಲಿ ₹10,657 ಕೋಟಿ ಲಾಭ ಗಳಿಸಿದೆ. ಹೊಸ ಕಾರ್ಮಿಕ ಸಂಹಿತೆಗಳು ಕಂಪನಿಯ ಲಾಭದ ಮೇಲೆ ಪರಿಣಾಮ ಉಂಟುಮಾಡಿವೆ. ಈ ಪರಿಣಾಮ ಒಂದು ಬಾರಿಗೆ ಮಾತ್ರ ಇರಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಕಂಪನಿಯ ಆಡಳಿತ ಮಂಡಳಿಯು ಈ ಬಾರಿ ತನ್ನ ಷೇರುದಾರರಿಗೆ ಪ್ರತಿ ಷೇರಿಗೆ ₹57 ಲಾಭಾಂಶ ನೀಡಲು ಶಿಫಾರಸು ಮಾಡಿದೆ. ಇದರಲ್ಲಿ ₹46 ವಿಶೇಷ ಲಾಭಾಂಶವೂ ಸೇರಿದೆ.

ADVERTISEMENT

ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ₹12,380 ಕೋಟಿ ಲಾಭ ಗಳಿಸಿತ್ತು. ಈ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಕಂಪನಿಯು ₹12,075 ಕೋಟಿ ಲಾಭ ಗಳಿಸಿತ್ತು.

ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದ ಪರಿಣಾಮವಾಗಿ ಕಂಪನಿಯು ₹2,128 ಕೋಟಿಯ ‘ಶಾಸನಾತ್ಮಕ ವೆಚ್ಚವನ್ನು’ ಭರಿಸಬೇಕಾಯಿತು. ಒಂದು ಬಾರಿಯ ಈ ವೆಚ್ಚ ಇಲ್ಲವಾಗಿದ್ದರೆ ಕಂಪನಿಯ ಲಾಭವು ಶೇ 8.5ರಷ್ಟು ಹೆಚ್ಚಳ ಕಂಡು, ₹13,438 ಕೋಟಿಗೆ ತಲುಪಿರುತ್ತಿತ್ತು ಎಂದು ಪ್ರಕಟಣೆ ತಿಳಿಸಿದೆ.

ದೇಶದ ಖಾಸಗಿ ರಂಗದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನೀಡಿರುವ ಕಂಪನಿಗಳ ಪೈಕಿ ಒಂದಾಗಿರುವ ಟಿಸಿಎಸ್‌ ನೌಕರರ ಸಂಖ್ಯೆಯು ಡಿಸೆಂಬರ್‌ ತ್ರೈಮಾಸಿಕದಲ್ಲಿ 11,151ರಷ್ಟು ಕಡಿಮೆ ಆಗಿದೆ. ಕಂಪನಿಯಲ್ಲಿ ಈಗ 5.82 ಲಕ್ಷ ನೌಕರರು ಇದ್ದಾರೆ.

ಡಿಸೆಂಬರ್‌ ತ್ರೈಮಾಸಿಕದಲ್ಲಿ ಕಂಪನಿಯ ವರಮಾನವು ₹67,087 ಕೋಟಿಗೆ ಹೆಚ್ಚಳ ಕಂಡಿದೆ, ಪ್ರಮಾಣದ ಲೆಕ್ಕದಲ್ಲಿ ಶೇ 4.86ರಷ್ಟು ಹೆಚ್ಚಾಗಿದೆ.

ಕಂಪನಿಯು ಕೃತಕ ಬುದ್ಧಿಮತ್ತೆ ವಿಭಾಗದಿಂದ ಗಳಿಸುವ ವರಮಾನವು ವಾರ್ಷಿಕ ಲೆಕ್ಕದಲ್ಲಿ ಶೇ 17ರಷ್ಟು ಹೆಚ್ಚಳ ಕಂಡಿದೆ. ಅಷ್ಟೇ ಅಲ್ಲ, ಜಾಗತಿಕ ಮಟ್ಟದಲ್ಲಿ ಸವಾಲುಗಳು ಮುಂದುವರಿದಿದ್ದರೂ, ಕಂಪನಿಯು ಉತ್ತರ ಅಮೆರಿಕದಿಂದ ಗಳಿಸುವ ವರಮಾನದ ಪ್ರಮಾಣವು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 1.3ರಷ್ಟು ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.