ADVERTISEMENT

ಟಿಸಿಎಸ್‌ ಫಲಿತಾಂಶ: ಲಾಭ, ವರಮಾನ ಏರಿಕೆ

ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ವಲಯದ ವರಮಾನ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 14:38 IST
Last Updated 9 ಅಕ್ಟೋಬರ್ 2025, 14:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜುಲೈ–ಸೆಪ್ಟೆಂಬರ್ ತ್ರೈಮಾಸಿಕದ ಹಣಕಾಸು ಫಲಿತಾಂಶವನ್ನು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಗುರುವಾರ ಪ್ರಕಟಿಸಿದ್ದು, ಕಂಪನಿಯ ನಿವ್ವಳ ಲಾಭವು ಶೇ 1.4ರಷ್ಟು ಹೆಚ್ಚಾಗಿದೆ. ಕಂಪನಿಯು ಈ ತ್ರೈಮಾಸಿಕದಲ್ಲಿ ₹12,075 ಕೋಟಿ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಲಾಭವು ₹11,909 ಕೋಟಿ ಆಗಿತ್ತು.

ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ವಲಯಗಳಿಗೆ ನೀಡುವ ಸೇವೆಯಲ್ಲಿ ಟಿಸಿಎಸ್‌ ವರಮಾನ ಜಾಸ್ತಿ ಆಗಿರುವುದು ಲಾಭ ಹೆಚ್ಚಳಕ್ಕೆ ಒಂದು ಕಾರಣ.

ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ವರಮಾನವು ಶೇ 2.39ರಷ್ಟು ಹೆಚ್ಚಳ ಕಂಡು, ₹65,799 ಕೋಟಿಗೆ ತಲುಪಿದೆ. ಇದು ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ₹64,259 ಕೋಟಿ ಆಗಿತ್ತು. ಆದರೆ, ಈ ವರ್ಷದ ಜೂನ್‌ ತ್ರೈಮಾಸಿಕಕ್ಕೆ ಹೋಲಿಸಿದರೆ ವರಮಾನ ಶೇ 3.7ರಷ್ಟು ಹೆಚ್ಚಾಗಿದ್ದರೂ ಲಾಭದ ಪ್ರಮಾಣವು ಶೇ 5.3ರಷ್ಟು ಕಡಿಮೆ ಆಗಿದೆ.

ADVERTISEMENT

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ತಂತ್ರಜ್ಞಾನ ಮತ್ತು ಸೇವಾ ವಲಯದ ವಹಿವಾಟುಗಳ ವರಮಾನ ಶೇ 2.8ರಷ್ಟು, ಬಿಎಫ್ಎಸ್‌ಐ (ಬ್ಯಾಂಕಿಂಗ್, ಹಣಕಾಸು ಸೇವೆ ಮತ್ತು ವಿಮೆ) ವಲಯದಿಂದ ಸಿಗುವ ವರಮಾನ ಶೇ 1ರಷ್ಟು ಬೆಳವಣಿಗೆ ದಾಖಲಿಸಿದೆ. ಅಮೆರಿಕದಿಂದ ಬರುವ ವರಮಾನ ಪ್ರಮಾಣದಲ್ಲಿ ಶೇ 0.1ರಷ್ಟು ಇಳಿಕೆ ಆಗಿದೆ. ಆದರೆ ಲ್ಯಾಟಿನ್ ಅಮೆರಿಕದಿಂದ ಸಿಗುವ ವರಮಾನವು ಶೇ 1.8ರಷ್ಟು ಹೆಚ್ಚಾಗಿದೆ.

ಭಾರತದಲ್ಲಿ 1 ಗಿಗಾವಾಟ್‌ ಸಾಮರ್ಥ್ಯದ ಎ.ಐ. ದತ್ತಾಂಶ ಕೇಂದ್ರ ಸ್ಥಾಪಿಸಲು ಹೊಸ ಸಂಸ್ಥೆಯೊಂದನ್ನು ಹುಟ್ಟುಹಾಕುವುದಾಗಿ ಟಿಸಿಎಸ್ ತಿಳಿಸಿದೆ. ಕಂಪನಿಯು ತನ್ನ ಷೇರುದಾರರಿಗೆ ₹11 ಮಧ್ಯಂತರ ಲಾಭಾಂಶ ಘೋಷಿಸಿದೆ.

‘ಆರು ಸಾವಿರ ಮಂದಿ ಕೆಲಸದಿಂದ ಬಿಡುಗಡೆ’

ನವದೆಹಲಿ (ಪಿಟಿಐ): ಪುನರ್‌ರಚನೆ ಪ್ರಕ್ರಿಯೆಯ ಭಾಗವಾಗಿ ಒಟ್ಟು 6000 ನೌಕರರನ್ನು ‘ಕೆಲಸದಿಂದ ಬಿಡುಗಡೆ ಮಾಡಲಾಗಿದೆ’ ಎಂದು ಟಿಸಿಎಸ್‌ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಸುದೀಪ್ ಕುನ್ನುಮಾಲ್ ಹೇಳಿದ್ದಾರೆ. ಕಂಪನಿಯು ಕೆಲಸದಿಂದ ತೆಗೆದಿರುವ ನೌಕರರ ಸಂಖ್ಯೆಯು 80 ಸಾವಿರ ಕೂಡ ಆಗಿರಬಹುದು ಎಂಬ ಅಂದಾಜುಗಳ ಬಗ್ಗೆ ಪ್ರಶ್ನಿಸಿದಾಗ ಕುನ್ನುಮಾಲ್ ಅವರು ‘ಈ ಸಂಖ್ಯೆ ಸತ್ಯವಲ್ಲ ಇದು ತೀರಾ ಉತ್ಪ್ರೇಕ್ಷೆಯಿಂದ ಕೂಡಿದ ಸಂಖ್ಯೆ’ ಎಂದು ಉತ್ತರಿಸಿದ್ದಾರೆ. ಆದರೆ ಈ ನಡುವೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಐ.ಟಿ. ಉದ್ಯೋಗಿಗಳ ಸಂಘಟನೆ ಎನ್‌ಐಟಿಇಎಸ್‌ ಕಂಪನಿಯಲ್ಲಿ ಉದ್ಯೋಗಿಗಳ ಸಂಖ್ಯೆಯು ಒಂದು ತ್ರೈಮಾಸಿಕದ ಅವಧಿಯಲ್ಲಿ 19755ರಷ್ಟು ಕಡಿಮೆ ಆಗಿದೆ ಎಂದು ಹೇಳಿದೆ. ಮಧ್ಯಮ ಮತ್ತು ಹಿರಿಯ ಶ್ರೇಣಿಯ ನೌಕರರ ಪೈಕಿ ಒಟ್ಟು 6000 ಮಂದಿಯನ್ನು ‘ಕೆಲಸದಿಂದ ಬಿಡುಗಡೆ ಮಾಡಲಾಗಿದೆ’ ಎಂದು ಕುನ್ನುಮಾಲ್‌ ಹೇಳಿದ್ದಾರೆ. ಸೂಕ್ತವಾದ ಜವಾಬ್ದಾರಿಯ ಹುದ್ದೆಯಲ್ಲಿ ಮರುನಿಯೋಜನೆ ಸಾಧ್ಯವಾಗದವರನ್ನು ‘ಕೆಲಸದಿಂದ ಬಿಡುಗಡೆ ಮಾಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ. ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು 18500 ಮಂದಿಯನ್ನು ಹೊಸದಾಗಿ ನೇಮಕ ಮಾಡಿಕೊಂಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಒಟ್ಟು 12261 ನೌಕರರನ್ನು ಕೆಲಸದಿಂದ ತೆಗೆಯಲು ಬಯಸಿರುವುದಾಗಿ ಟಿಸಿಎಸ್ ಕಂಪನಿಯು ಜುಲೈನಲ್ಲಿ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.