ಟಿಸಿಎಸ್ ಸಿಇಒ ಕೆ. ಕೃತಿವಾಸನ್
–ಪಿಟಿಐ ಚಿತ್ರ
ಬೆಂಗಳೂರು: ದೇಶದ ಐ.ಟಿ. ಸೇವಾ ವಲಯದ ಅತಿದೊಡ್ಡ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ (ಟಿಸಿಎಸ್) ಜೂನ್ ತ್ರೈಮಾಸಿಕದ ವರಮಾನವು ನಿರೀಕ್ಷೆಗಿಂತ ಕಡಿಮೆ ಆಗಿದೆ. ತೆರಿಗೆ ಸಂಬಂಧಿತ ಅನಿಶ್ಚಿತತೆಗಳ ಕಾರಣದಿಂದಾಗಿ ಐ.ಟಿ ಸೇವೆಗಳ ಗ್ರಾಹಕರು ಎಚ್ಚರಿಕೆಯ ಹೆಜ್ಜೆ ಇರಿಸಿದ್ದುದು ಇದಕ್ಕೆ ಒಂದು ಕಾರಣ.
ಟಿಸಿಎಸ್‌ನ ವರಮಾನವು ಜೂನ್ ತ್ರೈಮಾಸಿಕದಲ್ಲಿ ₹63,437 ಕೋಟಿ ಆಗಿದೆ. ಇದು ಹಿಂದಿನ ವರ್ಷದ ಇದೇ ತ್ರೈಮಾಸಿಕದ ವರಮಾನಕ್ಕೆ ಹೋಲಿಸಿದರೆ ಶೇ 1.3ರಷ್ಟು ಹೆಚ್ಚು. ಆದರೆ, ಕಂಪನಿಯ ವರಮಾನವು ₹64,666 ಕೋಟಿ ಆಗಬಹುದು ಎಂಬುದು ಮಾರುಕಟ್ಟೆ ತಜ್ಞರ ಸರಾಸರಿ ಅಂದಾಜು ಆಗಿತ್ತು.
ಟಿಸಿಎಸ್‌ನ ನಿವ್ವಳ ಲಾಭವು ಶೇ 6ರಷ್ಟು ಹೆಚ್ಚಾಗಿ ₹12,760 ಕೋಟಿಗೆ ತಲುಪಿದೆ. ಇದು ತಜ್ಞರ ನಿರೀಕ್ಷೆಗಿಂತ ಹೆಚ್ಚಾಗಿದೆ. ವೇತನ ಹೆಚ್ಚಳವನ್ನು ಮುಂದೂಡಿದ್ದು ಹಾಗೂ ಇತರ ವರಮಾನದಲ್ಲಿ ಏರಿಕೆ ಆಗಿರುವುದು ಲಾಭವು ನಿರೀಕ್ಷೆಗಿಂತ ಹೆಚ್ಚಾಗುವುದಕ್ಕೆ ಮುಖ್ಯ ಕಾರಣ.
ಅಮೆರಿಕದ ಮಾರುಕಟ್ಟೆಯಿಂದ ಐ.ಟಿ. ಸೇವೆಗಳಿಗೆ ಬರುವ ಬೇಡಿಕೆ ಹೆಚ್ಚಳ ಆಗಬಹುದು ಎಂದು ಐ.ಟಿ. ಕಂಪನಿಗಳು ನಿರೀಕ್ಷೆ ಹೊಂದಿದ್ದವು. ಆದರೆ, ಅಮೆರಿಕವು ಬೇರೆ ಬೇರೆ ದೇಶಗಳ ಮೇಲೆ ವಿಧಿಸಬಹುದಾದ ಸುಂಕದ ವಿಚಾರವಾಗಿ ಅನಿಶ್ಚಿತತೆಗಳು ಇರುವ ಕಾರಣದಿಂದಾಗಿ ಈ ನಿರೀಕ್ಷೆಗೆ ಪೆಟ್ಟು ಬಿದ್ದಿದೆ.
‘ಜಾಗತಿಕ ಅರ್ಥ ವ್ಯವಸ್ಥೆಯಲ್ಲಿ ಇರುವ ಅನಿಶ್ಚಿತತೆಗಳು ಹಾಗೂ ಜಾಗತಿಕ ಮಟ್ಟದಲ್ಲಿನ ಬಿಕ್ಕಟ್ಟುಗಳ ಕಾರಣದಿಂದಾಗಿ ಬೇಡಿಕೆ ತಗ್ಗಿದೆ’ ಎಂದು ಟಿಸಿಎಸ್ ಕಂಪನಿಯ ಸಿಇಒ ಕೆ. ಕೃತಿವಾಸನ್ ಹೇಳಿದ್ದಾರೆ. ಜೂನ್ ತ್ರೈಮಾಸಿಕದ ಹಣಕಾಸಿನ ಫಲಿತಾಂಶವನ್ನು ಪ್ರಕಟಿಸಿದ ಮೊದಲ ಪ್ರಮುಖ ಐ.ಟಿ. ಸೇವಾ ಕಂಪನಿ ಟಿಸಿಎಸ್. ಎಚ್‌ಸಿಎಲ್ ಟೆಕ್ನಾಲಜೀಸ್ ಮುಂದಿನ ವಾರ ಫಲಿತಾಂಶ ಪ್ರಕಟಿಸಲಿದೆ, ಇನ್ಫೊಸಿಸ್ ಈ ತಿಂಗಳ ದ್ವಿತೀಯಾರ್ಧದಲ್ಲಿ ಫಲಿತಾಂಶ ಪ್ರಕಟಿಸಲಿದೆ.
ಕಳೆದ ವರ್ಷದ ಜೂನ್ ತ್ರೈಮಾಸಿಕದ ವರಮಾನಕ್ಕೆ ಹೋಲಿಸಿದರೆ ಈ ಬಾರಿ, ಆರು ವಿಭಾಗಗಳ ಪೈಕಿ ನಾಲ್ಕರಲ್ಲಿ ಟಿಸಿಎಸ್‌ನ ವರಮಾನವು ಕಡಿಮೆ ಆಗಿದೆ. ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆ, ತಂತ್ರಜ್ಞಾನ ಸೇವೆಗಳ ವಿಭಾಗದಲ್ಲಿ ವರಮಾನ ಏರಿಕೆ ಆಗಿದೆ.
‘ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ವಲಯಗಳಲ್ಲಿ ಬೇಡಿಕೆ ಹೆಚ್ಚಳ ಕಂಡಿರುವುದು ಒಂದಿಷ್ಟು ಸಮಾಧಾನ ಮೂಡಿಸುತ್ತಿದೆ. ಆದರೆ ಅಮೆರಿಕ ಮತ್ತು ಯುರೋಪಿನ ಮಾರುಕಟ್ಟೆಗಳಲ್ಲಿ ಬೇಡಿಕೆ ಹೆಚ್ಚಾಗದಿರುವುದು ಬೇಡಿಕೆಯ ಸುತ್ತ ಕಳವಳಗಳನ್ನು ಮೂಡಿಸಿದೆ’ ಎಂದು ಸ್ಟಾಕ್ಸ್‌ಬಾಕ್ಸ್ ಸಂಸ್ಥೆಯ ವಿಶ್ಲೇಷಕ ಸಾಗರ್ ಶೆಟ್ಟಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.