ನವದೆಹಲಿ: ಧಾರ್ಮಿಕ ಹಾಗೂ ದತ್ತಿ ಟ್ರಸ್ಟ್‌ಗಳಿಗೆ ಅನಾಮಧೇಯವಾಗಿ ನೀಡುವ ದೇಣಿಗೆಗಳಿಗೆ ತೆರಿಗೆ ವಿನಾಯಿತಿ ನೀಡುವುದನ್ನು ಮುಂದುವರಿಸಬೇಕು ಎಂದು ಬಿಜೆಪಿ ಮುಖಂಡ ಬೈಜಯಂತ್ ಪಾಂಡಾ ನೇತೃತ್ವದ ಸಂಸತ್ತಿನ ಪರಿಶೀಲನಾ ಸಮಿತಿಯು ಶಿಫಾರಸು ಮಾಡಿದೆ.
ಹೊಸ ಆದಾಯ ತೆರಿಗೆ ಮಸೂದೆಯಲ್ಲಿ ಈ ಅಂಶವನ್ನು ಮುಂದುವರಿಸಬೇಕು ಎಂದು ಅದು ಹೇಳಿದೆ. ಈ ವಿನಾಯಿತಿಯನ್ನು ತೆಗೆದಲ್ಲಿ, ಲಾಭದ ಉದ್ದೇಶ ಇಲ್ಲದ ಸಂಸ್ಥೆಗಳ (ಎನ್‌ಪಿಒ) ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಸಮಿತಿ ಹೇಳಿದೆ.
ಹೊಸ ಆದಾಯ ತೆರಿಗೆ ಮಸೂದೆಯನ್ನು ಸಮಿತಿಯು ಪರಿಶೀಲಿಸಿದೆ. ಟಿಡಿಎಸ್ ರೂಪದಲ್ಲಿ ಕಡಿತ ಆದ ಮೊತ್ತವನ್ನು ಆದಾಯ ತೆರಿಗೆ ವಿವರ ಸಲ್ಲಿಸುವ ಕಡೆಯ ದಿನ ಕಳೆದ ನಂತರವೂ ಯಾವುದೇ ದಂಡ ಶುಲ್ಕ ಇಲ್ಲದೆ ಕ್ಲೇಮ್ ಮಾಡಿಕೊಳ್ಳಲು ತೆರಿಗೆದಾರರಿಗೆ ಅವಕಾಶ ಇರಬೇಕು ಎಂದು ಸಮಿತಿಯು ಸಲಹೆ ನೀಡಿದೆ.
ಹೊಸ ‘ಆದಾಯ ತೆರಿಗೆ ಮಸೂದೆ–2025’, ಆರು ದಶಕಗಳಷ್ಟು ಹಳೆಯದಾಗಿರುವ ‘ಆದಾಯ ತೆರಿಗೆ ಕಾಯ್ದೆ–1961’ರ ಬದಲಿಗೆ ಜಾರಿಗೆ ಬರಲಿದೆ. ಪರಿಶೀಲನಾ ಸಮಿತಿಯ ವರದಿಯನ್ನು ಲೋಕಸಭೆಯಲ್ಲಿ ಸೋಮವಾರ ಮಂಡಿಸಲಾಯಿತು.
ಹೊಸ ಮಸೂದೆಯು, ಶುದ್ಧ ಧಾರ್ಮಿಕ ಟ್ರಸ್ಟ್‌ಗಳು ಪಡೆಯುವ ಅನಾಮಧೇಯ ದೇಣಿಗೆಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗೆ ಇರಿಸಿದೆ. ಆದರೆ ದತ್ತಿ ಕಾರ್ಯವನ್ನೂ ನಡೆಸುವ ಧಾರ್ಮಿಕ ಟ್ರಸ್ಟ್‌ಗಳು ಪಡೆಯುವ ಇಂತಹ ದೇಣಿಗೆಗಳಿಗೆ ತೆರಿಗೆ ಪಾವತಿಸಬೇಕು ಎಂದು ಮಸೂದೆಯು ಹೇಳುತ್ತದೆ.
ಎಲ್ಲ ನೋಂದಾಯಿತ ಎನ್‌ಪಿಒಗಳು ಪಡೆಯುವ ಅನಾಮಧೇಯ ದೇಣಿಗೆಗೆ ಶೇ 30ರಷ್ಟು ತೆರಿಗೆ ಇರಬೇಕು ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಧಾರ್ಮಿಕ ಉದ್ದೇಶಕ್ಕೆ ಮಾತ್ರ ಸ್ಥಾಪಿಸಿರುವ ಎನ್‌ಪಿಒಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.
ಸಂಸತ್ತಿನ ಪರಿಶೀಲನಾ ಸಮಿತಿ ನೀಡಿರುವ ಶಿಫಾರಸುಗಳು ಸಲಹಾ ಸ್ವರೂಪದ್ದಾಗಿರುತ್ತವೆ. ಈ ಶಿಫಾರಸುಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವು ಕೇಂದ್ರಕ್ಕೆ ಸರ್ಕಾರಕ್ಕೆ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.