ನವದೆಹಲಿ: ವಿದ್ಯುತ್ ಚಾಲಿತ ವಾಹನಗಳ ತಯಾರಿಕಾ ಕಂಪನಿ ಟೆಸ್ಲಾ ಮುಂಬೈನ ಲೋಧಾ ಲಾಜಿಸ್ಟಿಕ್ಸ್ ಪಾರ್ಕ್‌ನಲ್ಲಿ 24,565 ಚದರ ಅಡಿ ಸ್ಥಳವನ್ನು ಐದು ವರ್ಷದ ಅವಧಿಗೆ ಗುತ್ತಿಗೆ ಪಡೆದುಕೊಂಡಿದೆ.
ಈ ಸ್ಥಳಕ್ಕೆ ಮಾಸಿಕ ಬಾಡಿಗೆಯು ₹37.53 ಲಕ್ಷವಿದೆ ಎಂದು ರಿಯಲ್ ಎಸ್ಟೇಟ್ ದತ್ತಾಂಶ ವಿಶ್ಲೇಷಕ ಕಂಪನಿ ಸಿಆರ್‌ಇ ಮ್ಯಾಟ್ರಿಕ್ಸ್ ಮಂಗಳವಾರ ತಿಳಿಸಿದೆ.
ಟೆಸ್ಲಾ ಇಂಡಿಯಾ ಮೋಟರ್ ಆ್ಯಂಡ್ ಎನರ್ಜಿ ಪ್ರೈವೆಟ್ ಲಿಮಿಟೆಡ್, ಮುಂಬೈನ ಕುರ್ಲಾ ವೆಸ್ಟ್‌ನಲ್ಲಿ ಐದು ವರ್ಷದ ಅವಧಿಗೆ ಸ್ಥಳವನ್ನು ಮ್ಯಾಕ್ರೋಟೆಕ್ ಡೆವಲಪರ್ಸ್ ಲಿಮಿಟೆಡ್‌ನಿಂದ ಪಡೆದುಕೊಂಡಿದೆ. ಪ್ರತಿ ಚದರ ಅಡಿಗೆ ₹153ರಂತೆ ಬಾಡಿಗೆ ಪಾವತಿಸಲಿದೆ.
ಜೂನ್ 1ರಿಂದ ಬಾಡಿಗೆ ಆರಂಭವಾಗಿದ್ದು, ವಾರ್ಷಿಕವಾಗಿ ಶೇ 5ರಷ್ಟು ಬಾಡಿಗೆ ದರ ಹೆಚ್ಚಳವಾಗಲಿದೆ. ಐದು ವರ್ಷದಲ್ಲಿ ಅಂದಾಜು ₹24 ಕೋಟಿ ಬಾಡಿಗೆ ಪಾವತಿಸಲಿದೆ ಎಂದು ತಿಳಿಸಿದೆ.
ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ‘ಟೆಸ್ಲಾ ಕಂಪನಿಯು ಭಾರತದಲ್ಲಿ ಕಾರುಗಳ ತಯಾರಿಕಾ ಘಟಕ ಸ್ಥಾಪಿಸಲು ಆಸಕ್ತಿ ಹೊಂದಿಲ್ಲ. ಮಳಿಗೆಗಳನ್ನು ತೆರೆಯುವ ಉದ್ದೇಶ ಮಾತ್ರ ಹೊಂದಿದೆ’ ಎಂದು ಸೋಮವಾರ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.