ADVERTISEMENT

ಭಾರತ ಪ್ರವೇಶಿಸುವ ಯೋಜನೆ ತಡೆಹಿಡಿದ ಟೆಸ್ಲಾ

ರಾಯಿಟರ್ಸ್
Published 13 ಮೇ 2022, 14:21 IST
Last Updated 13 ಮೇ 2022, 14:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದಲ್ಲಿ ವಿದ್ಯುತ್ ಚಾಲಿತ (ಇ.ವಿ.) ಕಾರುಗಳನ್ನು ಮಾರಾಟ ಮಾಡುವ ಯೋಜನೆಯನ್ನು ಟೆಸ್ಲಾ ಕಂಪನಿಯು ತಾತ್ಕಾಲಿಕವಾಗಿ ತಡೆಹಿಡಿದಿದೆ, ಮಳಿಗೆ ತೆರೆಯಲು ಸೂಕ್ತ ಜಾಗಕ್ಕೆ ಹುಡುಕಾಟ ನಡೆಸುವ ಕೆಲಸ ಕೈಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಕಡಿಮೆ ತೆರಿಗೆ ಪಾವತಿಸಿ ಕಾರುಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ಸಿಗದ ಕಾರಣದಿಂದಾಗಿ ಕಂಪನಿ ಈ ಹೆಜ್ಜೆ ಇರಿಸಿದೆ ಎನ್ನಲಾಗಿದೆ. ಅಮೆರಿಕ ಮತ್ತು ಚೀನಾದಿಂದ ಆಮದು ಮಾಡಿಕೊಂಡ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಿ, ಇಲ್ಲಿ ಬೇಡಿಕೆ ಎಷ್ಟಿದೆ ಎಂಬುದನ್ನು ಪರಿಶೀಲಿಸಲು ಟೆಸ್ಲಾ ಮುಂದಾಗಿತ್ತು.

ಆದರೆ, ಕೇಂದ್ರ ಸರ್ಕಾರವು ತೆರಿಗೆ ಪ್ರಮಾಣ ಕಡಿಮೆ ಮಾಡುವುದಕ್ಕೂ ಮೊದಲು ಕಾರುಗಳನ್ನು ಭಾರತದಲ್ಲೇ ತಯಾರಿಸಲಾಗುತ್ತದೆ ಎಂಬ ಭರವಸೆ ನೀಡುವಂತೆ ಟೆಸ್ಲಾ ಕಂಪನಿಗೆ ಹೇಳಿತ್ತು. ಆಮದು ಮಾಡಿಕೊಂಡ ವಾಹನಗಳಿಗೆ ದೇಶದಲ್ಲಿ ಗರಿಷ್ಠ ಶೇ 100ರವರೆಗೆ ತೆರಿಗೆ ವಿಧಿಸಲು ಅವಕಾಶವಿದೆ.

ADVERTISEMENT

ತೆರಿಗೆ ವಿನಾಯಿತಿ ಸಿಗಬಹುದೇ ಎಂಬುದನ್ನು ಬಜೆಟ್ ಮಂಡನೆಯವರೆಗೂ (ಫೆಬ್ರುವರಿ 1) ಕಂಪನಿ ಕಾದು ನೋಡಿತು. ಆದರೆ ತೆರಿಗೆ ವಿನಾಯಿತಿ ಸಿಗಲಿಲ್ಲವಾದ ಕಾರಣ, ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ನವದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ಮಳಿಗೆ ಆರಂಭಿಸಲು ಟೆಸ್ಲಾ ಹುಡುಕಾಟ ನಡೆಸಿತ್ತು. ಈಗ ಆ ಕೆಲಸವನ್ನು ಕಂಪನಿಯು ತಡೆಹಿಡಿದಿದೆ. ಈ ವಿಚಾರವಾಗಿ ಟೆಸ್ಲಾ ಕಡೆಯಿಂದ, ಕೇಂದ್ರ ಸರ್ಕಾರದ ಕಡೆಯಿಂದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.