ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆಯು ಮೇ ತಿಂಗಳಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ ಎಂದು ಎಸ್ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ಸಮೀಕ್ಷೆ ವರದಿ ಸೋಮವಾರ ತಿಳಿಸಿದೆ.
ಏಪ್ರಿಲ್ ತಿಂಗಳಲ್ಲಿ ಸೂಚ್ಯಂಕವು 58.2 ದಾಖಲಾಗಿತ್ತು. ಮೇ ತಿಂಗಳಲ್ಲಿ 57.6 ಆಗಿದೆ. ಹಣದುಬ್ಬರದ ಒತ್ತಡ, ಉತ್ಪನ್ನಗಳಿಗೆ ಕುಸಿದ ಬೇಡಿಕೆಯಿಂದ ಸೂಚ್ಯಂಕವು ಇಳಿಕೆಯಾಗಿದೆ ಎಂದು ತಿಳಿಸಿದೆ.
ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕ (ಪಿಎಂಐ) ಆಧಾರದ ಮೇಲೆ ಲೆಕ್ಕ ಹಾಕುವ ಈ ಸೂಚ್ಯಂಕವು 50ರ ಮೇಲಿದ್ದರೆ ಸಕಾರಾತ್ಮಕ ಬೆಳವಣಿಗೆ ಎಂದು
ಅರ್ಥೈಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ನಕಾರಾತ್ಮಕ ಪ್ರಗತಿ ಎಂದು ಪರಿಗಣಿಸಲಾಗುತ್ತದೆ.
‘ದೇಶದ ತಯಾರಿಕಾ ವಲಯದ ಚಟುವಟಿಕೆ ಮೇ ತಿಂಗಳಲ್ಲಿ ಸದೃಢವಾಗಿದೆ. ಉತ್ಪಾದನೆ ಮತ್ತು ಹೊಸ ಆರ್ಡರ್‌ಗಳು ಏಪ್ರಿಲ್ ತಿಂಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ’ ಎಂದು ಎಚ್‌ಎಸ್‌ಬಿಸಿ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಂಜುಲ್ ಭಂಡಾರಿ ಹೇಳಿದ್ದಾರೆ. ಕಳೆದ ತಿಂಗಳು ಕಂಪನಿಗಳು ಹೆಚ್ಚುವರಿ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಂಡವು ಎಂದು ತಿಳಿಸಿದ್ದಾರೆ.
ಸರಕುಗಳ ವೆಚ್ಚ, ತಯಾರಿಕಾ ಮತ್ತು ಕಾರ್ಮಿಕರ ವೆಚ್ಚ ಹೆಚ್ಚಳವಾಗಿದೆ. ಇದರಿಂದ ತಯಾರಕರು ಮಾರಾಟದ ಬೆಲೆಯನ್ನು ಏರಿಕೆ ಮಾಡಿದ್ದಾರೆ. ಏಷ್ಯಾ, ಯುರೋಪ್, ಪಶ್ಚಿಮ ಏಷ್ಯಾ ಮತ್ತು ಅಮೆರಿಕದಿಂದ ಬೇಡಿಕೆ ಸದೃಢವಾಗಿದೆ ಎಂದು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಉತ್ಪಾದನೆಯಲ್ಲಿ ಹೆಚ್ಚಳವಾಗುವ ವಿಶ್ವಾಸವನ್ನು ತಯಾರಕರು ಹೊಂದಿದ್ದಾರೆ. ಸುಮಾರು 400 ತಯಾರಕರಿಗೆ ಕಳುಹಿಸಲಾದ ಪ್ರಶ್ನಾವಳಿಗಳಲ್ಲಿ ನಮೂದಾಗಿರುವ ಪ್ರತಿಕ್ರಿಯೆ ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ ಎಂದು ಸಮೀಕ್ಷೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.