ADVERTISEMENT

ಉಂಡೆ ಕೊಬ್ಬರಿ ಬೆಂಬಲ ಬೆಲೆ ₹ 11,300 ನಿಗದಿ: ಲಕ್ಷ್ಮಣ ಸವದಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 11:50 IST
Last Updated 6 ಆಗಸ್ಟ್ 2020, 11:50 IST
   

ಬೆಂಗಳೂರು:ಉಂಡೆ ಕೊಬ್ಬರಿ ಕ್ವಿಂಟಲ್‌ಗೆ ತಲಾ ₹11,300 ಬೆಂಬಲ ಬೆಲೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ವಿಧಾನಸೌಧದಲ್ಲಿ ಗುರುವಾರ ನಡೆದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ಬೆಲೆ ಸ್ಥಿರೀಕರಣ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿರುವುದಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಕೇಂದ್ರ ಸರ್ಕಾರ ಉಂಡೆ ಕೊಬ್ಬರಿಗೆ ಕ್ವಿಂಟಲ್‌ಗೆ ₹10,300 ಬೆಂಬಲ ಬೆಲೆ ನಿಗದಿ ಮಾಡಿತ್ತು. ರೈತರಿಗೆ ಇನ್ನೂ ಹೆಚ್ಚಿನ ಬೆಂಬಲ ಬೆಲೆ ಸಿಗಬೇಕು ಎಂಬ ಕಾರಣಕ್ಕೆ, ರೈತರ ಬೇಡಿಕೆ ಮನ್ನಿಸಿ, ಕ್ವಿಂಟಲ್‌ಗೆ ₹1,000 ನೀಡಲು ತೀರ್ಮಾನಿಸಲಾಯಿತು. ಈ ಮೊತ್ತವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಇದರಿಂದ ಪ್ರತಿ ರೈತರಿಗೆ ಒಂದು ಕ್ವಿಂಟಲ್‌ಗೆ ₹11,300 ಬೆಂಬಲ ಬೆಲೆ ಸಿಕ್ಕಂತಾಗುತ್ತದೆ ಎಂದು ಅವರು ಹೇಳಿದರು.

ADVERTISEMENT

ಇದರಿಂದ ರಾಜ್ಯ ಸರ್ಕಾರಕ್ಕೆ ₹38 ಕೋಟಿ ಹೊರೆ ಆಗಲಿದೆ. ಆದರೆ, ಈ ನಿರ್ಧಾರದಿಂದ ಚಿತ್ರದುರ್ಗ, ತುಮಕೂರು, ಹಾಸನ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಯ ಬೆಳೆಗಾರರಿಗೆ ಪ್ರಯೋಜನವಾಗುತ್ತದೆ ಎಂದು ಸವದಿ ತಿಳಿಸಿದರು.

ಅಲ್ಲದೆ, ಖರೀದಿ ನೋಂದಣಿ ಅವಧಿಯನ್ನು ಇದೇ 25 ರವರೆಗೆ ವಿಸ್ತರಿಸಲಾಗಿದೆ. ಖರೀದಿ ಕಾಲಾವಧಿಯನ್ನು ಸೆಪ್ಟಂಬರ್‌ 10 ರವರೆಗೆ ವಿಸ್ತರಿಸಲಾಗಿದೆ ಎಂದರು.

ಸಭೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.