ಮಂಗಳೂರು/ಶಿವಮೊಗ್ಗ: ತಂಬಾಕಿನ ಮೇಲಿನ ಜಿಎಸ್‌ಟಿ ಹೆಚ್ಚಳ ಆಗಲಿರುವ ಪರಿಣಾಮವಾಗಿ ಕೆಲವರು ಹಿಂಬಾಗಿಲಿನಿಂದ, ಬಿಲ್ ಇಲ್ಲದೆ ಅಡಿಕೆ ವ್ಯಾಪಾರಕ್ಕೆ ಕೈ ಹಾಕುವ ಸಾಧ್ಯತೆ ಇದೆ ಎಂಬ ಆತಂಕ ಕರಾವಳಿ ಭಾಗದ ಬೆಳೆಗಾರರಲ್ಲಿ ಉಂಟಾಗಿದೆ.
ಅಡಿಕೆ ಉತ್ಪಾದನೆಯಲ್ಲಿ ದೊಡ್ಡ ಭಾಗವು ಗುಟ್ಕಾ, ಪಾನ್ ಮಸಾಲಾ ತಯಾರಿಕೆಗೆ ಬಳಕೆಯಾಗುತ್ತದೆ. ತಂಬಾಕು ಇರುವ ಪಾನ್ ಮಸಾಲ ತಿನ್ನುವುದನ್ನು ಚಟ ಮಾಡಿಕೊಂಡವರು ಅದನ್ನು ಬಿಡುವುದು ಕಷ್ಟ. ಹೀಗಾಗಿ ಅಡಿಕೆ ಮಾರುಕಟ್ಟೆಗೆ ತೊಂದರೆ ಆಗುವ, ಅಡಿಕೆಗೆ ಬೇಡಿಕೆ ಕುಸಿಯುವ ಸಾಧ್ಯತೆ ಇಲ್ಲ ಎಂದು ಕೂಡ ಕೆಲವು ತಜ್ಞರು ಹೇಳಿದ್ದಾರೆ.
ಆದರೆ ಅಡಿಕೆಗೆ ಬೇಡಿಕೆ ಕುಸಿಯಬಹುದು ಎಂಬ ಆತಂಕ ಸೃಷ್ಟಿಸಿ ಬಿಲ್ ರಹಿತ ವ್ಯವಹಾರದಂಥ ಬೆಳವಣಿಗೆಗೆ ಮಾರುಕಟ್ಟೆ ಸಾಕ್ಷಿಯಾಗಬಹುದು ಎಂಬುದು ತಜ್ಞರ ಅಭಿಪ್ರಾಯ.
‘ಆತಂಕಪಡುವ ಅಗತ್ಯವಿಲ್ಲ’: ‘ಜಿಎಸ್‌ಟಿ ಹೆಚ್ಚಾದರೆ ಒಂದು ಪ್ಯಾಕೆಟ್ ಪಾನ್ ಮಸಾಲ ಬೆಲೆ 25 ಪೈಸೆ ಹೆಚ್ಚಳ ಆಗಬಹುದು. ಚಟಕ್ಕೆ ಬಿದ್ದವರಿಗೆ ಇದು ದೊಡ್ಡದಲ್ಲ. ಪಾನ್ ಮಸಾಲ ಕಂಪನಿಯವರು ಪ್ಯಾಕೆಟ್‌ನಲ್ಲಿ ಉತ್ಪನ್ನದ ಪ್ರಮಾಣ ಕಡಿಮೆ ಮಾಡಿ ಬೆಲೆ ಸರಿದೂಗಿಸುವಂಥ ಕ್ರಮಕ್ಕೆ ಮುಂದಾದರೂ ಅಚ್ಚರಿಪಡಬೇಕಾಗಿಲ್ಲ. ಆದ್ದರಿಂದ ಅಡಿಕೆ ವ್ಯಾಪಾರದ ಮೇಲೆ ದುಷ್ಪರಿಣಾಮವಾಗುವ ಸಾಧ್ಯತೆ ಕಡಿಮೆ’ ಎಂದು ತಜ್ಞ ವಿಘ್ನೇಶ್ವರ ವರ್ಮುಡಿ ಹೇಳಿದರು.
ತಂಬಾಕಿನ ಮೇಲೆ ಶೇ 40ರಷ್ಟು ಜಿಎಸ್‌ಟಿ ವಿಧಿಸುವ ನಿರ್ಧಾರದಿಂದ ಅಡಿಕೆ ಬೆಲೆಯ ಮೇಲೆ ಪರಿಣಾಮ ಆಗಲಿದೆ. ತೆರಿಗೆ ಹೆಚ್ಚಳದಿಂದ ಪಾನ್ ಮಸಾಲಾ ಬೆಲೆ ಹೆಚ್ಚಳ ಆಗುತ್ತದೆ. ಅದು ಖರೀದಿ ಹಾಗೂ ಬಳಕೆಯ ಮೇಲೆ ಪರಿಣಾಮ ಬೀರುತ್ತದೆ. ಖರೀದಿ ಕಡಿಮೆ ಆಗುತ್ತಿದ್ದಂತೆಯೇ ಉತ್ಪಾದನೆಯೂ ತಗ್ಗಿ ಗುಟ್ಕಾ, ಪಾನ್ ಮಸಾಲ ಉದ್ಯಮದಿಂದ ಬೇಡಿಕೆ ಕಡಿಮೆ ಆಗಲಿದೆ. ಇದರಿಂದ ಅಡಿಕೆ ಬೆಲೆ ಕುಸಿತ ಆಗಿ ಬೆಳೆಗಾರರಿಗೆ ತೊಂದರೆ ಆಗಲಿದೆ ಎಂದು ಶಿವಮೊಗ್ಗದ ಮ್ಯಾಮ್‌ಕೋಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ್ ಬರುವಾ ಹೇಳಿದರು.
ಪರಿಣಾಮವಿಲ್ಲ: ಹೆಗ್ಡೆ
‘ಶೇ 40ರಷ್ಟು ಜಿಎಸ್‌ಟಿಯಿಂದಾಗಿ ಅಡಿಕೆ ಬೆಳೆಗಾರರಿಗೆ ತೊಂದರೆ ಆಗದು. ಗುಟ್ಕಾ ಜೊತೆ ತಂಬಾಕು ಮಿಶ್ರಣವನ್ನು ಸರ್ಕಾರ ನಿಷೇಧಿಸಿದೆ. ಹೀಗಾಗಿ ಇಲ್ಲಿ ತಂಬಾಕು ಹಾಗೂ ಗುಟ್ಕಾವನ್ನು ಪ್ರತ್ಯೇಕವಾಗಿಯೇ ನೋಡಬೇಕಿದೆ’ ಎಂದು ಶಿವಮೊಗ್ಗ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಮಾದೇಶ ಹೆಗ್ಡೆ ಹೇಳುತ್ತಾರೆ.
‘ಗುಟ್ಕಾ ಜೊತೆ ತಂಬಾಕು ಮಿಶ್ರಣ ಮಾಡಿಕೊಂಡು ತಿನ್ನುವವರಿಗೆ ತಂಬಾಕಿನ ಬೆಲೆ ಹೆಚ್ಚಳದಿಂದ ಸ್ವಲ್ಪ ಹೊರೆಯಾಗಬಹುದು. ಆ ಬಗ್ಗೆ ತಂಬಾಕು ತಯಾರಿಕಾ ಕಂಪನಿಗಳು ಹಾಗೂ ತಂಬಾಕು ಮಿಶ್ರಣ ಮಾಡಿಕೊಂಡು ತಿನ್ನುವವರು ಚಿಂತಿಸಬೇಕಿದೆಯೇ ಹೊರತು ಅಡಿಕೆ ಬೆಳೆಗಾರರು ಮತ್ತು ಮಾರಾಟಗಾರರು ಅಲ್ಲ’ ಎಂದು ತಿಳಿಸಿದರು.
‘ತಂಬಾಕು ಉತ್ಪನ್ನಗಳ ಮೇಲೆ ಜಿಎಸ್‌ಟಿ ಹೇರಿರುವುದರಿಂದ ಅಡಿಕೆ ದರದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಬೇಡಿಕೆಯೂ ತಗ್ಗುವುದಿಲ್ಲ. ಈ ಹಿಂದೆ ವ್ಯಾಟ್ ದರವನ್ನು ಶೇ 2 ರಿಂದ 8ಕ್ಕೆ ಏರಿಕೆ ಮಾಡಿದಾಗ, ನಂತರ ಇನ್ನೂ ಶೇ 2ರಷ್ಟು ಹೆಚ್ಚಳ ಮಾಡಿದಾಗಲೂ ಯಾವುದೇ ತೊಂದರೆ ಆಗಿರಲಿಲ್ಲ. ಈಗಲೂ ಆಗುವುದಿಲ್ಲ’ ಎಂದರು.
ತಂಬಾಕು ಉತ್ಪನ್ನಗಳಿಗೆ ಜಿಎಸ್‌ಟಿ ಹೆಚ್ಚಳವು ಅಡಿಕೆ ದರದ ಮೇಲೆ ಅಷ್ಟೇನೂ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಈಗ ತಂಬಾಕು ಉತ್ಪನ್ನಗಳಿಗೆ ಸೆಸ್ ಮತ್ತು ಇತರ ತೆರಿಗೆ ಸೇರಿ ಶೇ 40ರವರೆಗೆ ಸುಂಕ ಆಗುತ್ತಿತ್ತು. ಈಗ ಅಡಿಕೆ ದರವೂ ಹೆಚ್ಚೇ ಇರುವ ಕಾರಣ ರೈತರ ಮೇಲೆ ತೀರಾ ಪರಿಣಾಮ ಉಂಟಾಗುವ ಸಾಧ್ಯತೆ ಕಡಿಮೆ. ಆದರೆ, ಈಗಿನ ಲಭ್ಯ ಮಾಹಿತಿ ಪ್ರಕಾರ ತೆರಿಗೆಯೇ ಶೇ 40ಷ್ಟು ಆಗುವ ಸಾಧ್ಯತೆಯಿದೆ. ತೆರಿಗೆ ಶೇ 40ರಷ್ಟು, ಸೆಸ್ ಸೇರಿ ಶೇ 52ಕ್ಕಿಂತ ಹೆಚ್ಚಾದರೆ ದರದಲ್ಲಿ ಸ್ವಲ್ಪ ಪ್ರಮಾಣದ ವ್ಯತ್ಯಾಸ ಆಗಬಹುದು. ಈ ಕುರಿತು ಸರಿಯಾದ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.–ಗೋಪಾಲಕೃಷ್ಣ ವೈದ್ಯ, ಅಧ್ಯಕ್ಷ, ಟಿಎಸ್ಎಸ್, ಶಿರಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.