ADVERTISEMENT

PV Web Exclusive | ಟಿಎಂಕೆ: ಪರಿಸರ ಸಂರಕ್ಷಣೆ ಕಾಳಜಿ

​ಕೇಶವ ಜಿ.ಝಿಂಗಾಡೆ
Published 14 ಸೆಪ್ಟೆಂಬರ್ 2020, 8:20 IST
Last Updated 14 ಸೆಪ್ಟೆಂಬರ್ 2020, 8:20 IST
ಬಿಡದಿಯಲ್ಲಿನ ಟಿಕೆಎಂ ಆವರಣದಲ್ಲಿ ನಿರ್ಮಿಸಿರುವ ಕೊಳ
ಬಿಡದಿಯಲ್ಲಿನ ಟಿಕೆಎಂ ಆವರಣದಲ್ಲಿ ನಿರ್ಮಿಸಿರುವ ಕೊಳ   

ಬೆಂಗಳೂರು: ಬಿಡದಿಯಲ್ಲಿ ಇರುವ ವಾಹನ ತಯಾರಿಕಾ ಕಂಪನಿ ಟೊಯೋಟ ಕಿರ್ಲೊಸ್ಕರ್‌ ಮೋಟರ್ಸ್‌ (ಟಿಕೆಎಂ), ಪರಿಸರ ಸಂರಕ್ಷಣೆ, ವಾಯು ಮಾಲಿನ್ಯ ನಿಯಂತ್ರಣ, ಮಳೆ ನೀರು ಸಂಗ್ರಹ, ಸೌರಶಕ್ತಿ ಬಳಕೆ, ತ್ಯಾಜ್ಯದ ಮರು ಬಳಕೆ ಕ್ಷೇತ್ರಗಳಲ್ಲಿ ತಂತ್ರಜ್ಞಾನ ನೆರವಿನಿಂದ ಸುಸ್ಥಿರ ಪ್ರಗತಿಗೆ ಶ್ರಮಿಸುತ್ತಿದೆ.

ಬಿಡದಿಯಲ್ಲಿನ ಎರಡು ತಯಾರಿಕಾ ಘಟಕಗಳಲ್ಲಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಕಂಪನಿಯಿಂದ ಹೊರ ಬರುವ ಪ್ರತಿಯೊಂದು ಹೊಸ ವಾಹನವು ವಾಯು ಮಾಲಿನ್ಯ ನಿಯಂತ್ರಣಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿದೆ. ಈ ವರ್ಷದ ಜನವರಿಯಿಂದಲೇ ವಾಹನಗಳ ತಯಾರಿಕೆಯಲ್ಲಿ ಮಾಲಿನ್ಯ ನಿಯಂತ್ರಣದ ಬಿಎಸ್‌6 ಮಾನದಂಡ ಅಳವಡಿಸಿರುವ ಕಂಪನಿಯು, ಹೈಬ್ರಿಡ್‌ ತಂತ್ರಜ್ಞಾನ ವಿಷಯದಲ್ಲಿ ಬಿಡಿಭಾಗಗಳನ್ನು ಭಾರತದಲ್ಲಿಯೇ ತಯಾರಿಸುವುದಕ್ಕೂ ಒತ್ತು ನೀಡಿದೆ.

‘ನೀರಿನ ಸದ್ಬಳಕೆ, ಸೌರಶಕ್ತಿ ಉತ್ಪಾದನೆ, ತ್ಯಾಜ್ಯ ನೀರಿನ ಮರು ಬಳಕೆ, ಅರಣ್ಯ ಸಂರಕ್ಷಣೆ ವಿಷಯಗಳಲ್ಲಿ ಕಾರ್ಪೊರೇಟ್‌ ಹೊಣೆಗಾರಿಕೆ ಕಾರ್ಯಕ್ರಮದಡಿ (ಸಿಎಸ್‌ಆರ್‌) ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ‘ಟೊಯೋಟಾ ಕಂಪನಿಯು ವಿಶ್ವದಾದ್ಯಂತ ಹೊಂದಿರುವ 56 ತಯಾರಿಕಾ ಘಟಕಗಳ ಪೈಕಿ ಬಿಡದಿ ಕ್ಯಾಂಪಸ್‌, ಈ ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಇದೆ ’ ಎಂದು ಕಂಪನಿಯ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ರಾಜು ಬಿ. ಕೇತ್ಕಳೆ ಅವರು ಹೇಳುತ್ತಾರೆ.

ADVERTISEMENT

ನೀರಿನ ಸದ್ಬಳಕೆ: ‘430 ಎಕರೆಗಳಷ್ಟು ವಿಶಾಲ ಆವರಣದಲ್ಲಿ ಮಳೆ ನೀರು ಸಂಗ್ರಹದ ಕೊಳ ನಿರ್ಮಾಣ,‌ ತ್ಯಾಜ್ಯ ನೀರಿನ ಶುದ್ಧೀಕರಣ ಘಟಕಗಳ ಮೂಲಕ ಕಾವೇರಿ ನೀರಿನ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಕಾವೇರಿ ನೀರಿನ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಉದ್ದೇಶವಿದೆ.

‘ಉಕ್ಕು ಸೇರಿದಂತೆ ವಿವಿಧ ಬಗೆಯ ತ್ಯಾಜ್ಯಗಳ ಮರು ಬಳಕೆಯಿಂದ ಪರಿಸರ ಸಂರಕ್ಷಣೆ ಸೇರಿದಂತೆ ದೊಡ್ಡ ಮೊತ್ತದ ಉಳಿತಾಯವೂ ಸಾಧ್ಯವಾಗಿದೆ. 25 ಎಕರೆ ಪ್ರದೇಶದಲ್ಲಿ ನಿರ್ಮಿಸಿರುವ ‘ಇಕೊ ಝೋನ್‌’, ಸುಸ್ಥಿರ ಬೆಳವಣಿಗೆಗೆ ಕಂಪನಿ ಹೊಂದಿರುವ ಬದ್ಧತೆಯ ಪ್ರತೀಕವಾಗಿದೆ. ಇಲ್ಲಿರುವ ಔಷಧಿ ಸಸ್ಯೋದ್ಯಾನದ ಸದ್ಬಳಕೆಗಾಗಿಟಾಟಾ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ.

‘ಪರಿಸರ ಸುಸ್ಥಿರತೆ ಉದ್ದೇಶದ ವಿವಿಧ ಕಾರ್ಯಕ್ರಮಗಳನ್ನು ಕಂಪನಿಗೆ ಹಣಕಾಸಿನ ಪ್ರತಿಫಲ ದೊರೆಯುವ ರೀತಿಯಲ್ಲಿ ಜಾರಿಗೊಳಿಸಲಾಗಿದೆ. ಮಳೆ ನೀರು ಸಂಗ್ರಹಕ್ಕೆ ಮಾಡಿದ ವೆಚ್ಚ ಮೂರ್ನಾಲ್ಕು ವರ್ಷಗಳಲ್ಲಿ ವಾಪಸ್‌ ಬಂದಿದೆ. ನಿರಂತರವಾಗಿ ಸುಸ್ಥಿರ ಪ್ರಗತಿ ಸಾಧಿಸಲಾಗುತ್ತಿದೆ. ಪರಿಸರ ಸಂರಕ್ಷಣೆಯ ರಾಯಭಾರಿಯ ಪಾತ್ರವನ್ನು ‘ಟಿಕೆಎಂ’ ಸಮರ್ಥವಾಗಿ ನಿಭಾಯಿಸುತ್ತಿದೆ’ ಎಂದೂ ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.