ADVERTISEMENT

ಸಂಕಷ್ಟದಲ್ಲಿ ಮೈಸೂರು ಎಪಿಎಂಸಿ

ತಗ್ಗಿದ ಆದಾಯ–ನಿರ್ವಹಣೆಗೆ ಕುತ್ತು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 16:05 IST
Last Updated 8 ಫೆಬ್ರುವರಿ 2021, 16:05 IST
   

ಮೈಸೂರು: ಕೃಷಿ ಉತ್ಪನ್ನಗಳ ವಹಿವಾಟಿಗೆ ಮುಕ್ತ ಅವಕಾಶ ಕಲ್ಪಿಸಿರುವುದರಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎಪಿಎಂಸಿ) ಸೆಸ್‌ ಸಂಗ್ರಹ ಪ್ರಮಾಣ ಗಣನೀಯವಾಗಿ ತಗ್ಗಿದ್ದು, ನಿರ್ವಹಣೆ ಕಷ್ಟಕರವಾಗಿರುವುದು ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪ್ರಸ್ತಾಪವಾಯಿತು.

ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ನೇತೃತ್ವದಲ್ಲಿ, ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೃಷಿ ಮಾರಾಟ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಈ ವಿಚಾರವನ್ನುಗಮನಕ್ಕೆ ತರಲಾಯಿತು.

‘ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ರೈತರು ಹೊರಗಡೆಯೂ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ, ಎಂಪಿಎಂಸಿಯಲ್ಲಿ ವಹಿವಾಟು ತಗ್ಗಿದ್ದು, ಆದಾಯ ಕಡಿಮೆ ಆಗಿದೆ’ ಎಂದು ಇಲಾಖೆ ಉಪನಿರ್ದೇಶಕಿ ಎಸ್‌.ಸಂಗೀತಾ ತಿಳಿಸಿದರು.

ADVERTISEMENT

‘2019–20ರ ನವೆಂಬರ್‌, ಡಿಸೆಂಬರ್‌, ಜನವರಿ ಅವಧಿಯಲ್ಲಿ ಮೈಸೂರಿನ ಬಂಡೀಪಾಳ್ಯ ಎಪಿಎಂಸಿಯಲ್ಲಿ ₹ 2.01 ಕೋಟಿ ಸೆಸ್‌ (ಮಾರುಕಟ್ಟೆ ಶುಲ್ಕ ವಸೂಲಿ) ಸಂಗ್ರಹವಾಗಿತ್ತು. ಆದರೆ, 2020–21ರ ಇದೇ ಅವಧಿಯಲ್ಲಿ ಕೇವಲ ₹ 1.47 ಕೋಟಿ ಸಂಗ್ರಹವಾಗಿದೆ. ಜಿಲ್ಲೆಯಲ್ಲಿರುವ ಏಳು ಎಪಿಎಂಸಿ ಸೇರಿ, ಶೇ 50ರಷ್ಟು ಸೆಸ್‌ ವಸೂಲಿ ಕಡಿಮೆ ಆಗಿದೆ’ ಎಂದು ಮಾಹಿತಿ ನೀಡಿದರು.

ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್‌ ನೇತೃತ್ವದಲ್ಲಿ ನಡೆದ ಸಭೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಶಾಸಕರಾದ ಜಿ.ಟಿ.ದೇವೇಗೌಡ, ಎಚ್‌.ಪಿ.ಮಂಜುನಾಥ್‌ ಇದ್ದಾರೆ –ಪ್ರಜಾವಾಣಿಚಿತ್ರ

‘ಬಂಡೀಪಾಳ್ಯದಲ್ಲಿರುವ ಎಂಪಿಎಂಸಿ ಹೊರತುಪಡಿಸಿ ಜಿಲ್ಲೆಯ ಉಳಿದ ಕಡೆ ಚಟುವಟಿಕೆಗಳು ಕಡಿಮೆ ಆಗಿವೆ. ಎಪಿಎಂಸಿ ನಡೆಸುವುದೇ ಕಷ್ಟಕರವಾಗಿದೆ. ನಿರ್ವಹಣೆಗೂ ಹಣ ಸಾಕಾಗುತ್ತಿಲ್ಲ’ ಎಂದು ಸಮಸ್ಯೆ ಹೇಳಿಕೊಂಡರು.

ಆಗ ಸಚಿವ ಸೋಮಶೇಖರ್‌, ‘ಎಂಪಿಎಂಸಿಗೆತೊಂದರೆಯಾದರೆ ಸರ್ಕಾರ ನೋಡಿಕೊಳ್ಳುತ್ತದೆ. ಸಿಬ್ಬಂದಿಗೆ ವೇತನನೀಡುತ್ತಿದೆ. ಎಪಿಎಂಸಿ ಹೊರಗಡೆಯೂ ಮಾರಾಟಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ರೈತರಿಗೆ ಸಹಾಯವಾಗಿಲ್ಲವೇ’ ಎಂದು ಪ್ರಶ್ನಿಸಿದರು.

ಅದಕ್ಕೆ ಉತ್ತರಿಸಿದ ಇಲಾಖೆ ಉಪನಿರ್ದೇಶಕರು, ‘ರೈತರಿಗೆ ಯಾವುದೇ ತೊಂದರೆಯಾಗಿಲ್ಲ’ ಎಂದರು.

ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ ಶಾಸಕ ಎಚ್‌.ಪಿ.ಮಂಜುನಾಥ್‌, ‘ಕಾಯ್ದೆಯಲಾಭ–ನಷ್ಟ ಬದಿಗಿರಲಿ. ಈ ಬಗ್ಗೆ ಸಮೀಕ್ಷೆ ನಡೆಸಿ ವರದಿ ಪಡೆಯೋಣ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಿಸಿದ ಗೋದಾಮುಗಳು ಖಾಲಿ ಬಿದ್ದಿವೆ. ಅವುಗಳನ್ನು ಬಾಡಿಗೆ ಕೊಟ್ಟರೆ ಎಪಿಎಂಸಿಗೆ ಆದಾಯವಾದರೂ ಬರುತ್ತದೆ’ ಎಂದು ಸಲಹೆ ನೀಡಿದರು.

2019–20ರಲ್ಲಿ ಮೈಸೂರು ಜಿಲ್ಲೆಯ ಎಪಿಎಂಸಿಗಳಲ್ಲಿ ₹ 21.69 ಕೋಟಿ ಸೆಸ್‌ ಸಂಗ್ರಹದ ಗುರಿ ಹೊಂದಲಾಗಿತ್ತು. ₹ 21.16 ಕೋಟಿ ಸಂಗ್ರಹವಾಗಿತ್ತು. 2020–21ರಲ್ಲಿ ₹ 24.35 ಕೋಟಿ ಸೆಸ್‌ ಸಂಗ್ರಹದ ಗುರಿ ಹೊಂದಲಾಗಿದೆ. ಆದರೆ, ಜನವರಿ ಅಂತ್ಯದವರೆಗೆ ಕೇವಲ ₹ 6 ಕೋಟಿ ಸಂಗ್ರಹವಾಗಿದೆ.

ಈ ಹಿಂದೆ ಕೃಷಿ ಉತ್ಪನ್ನಗಳನ್ನು ಎಪಿಎಂಸಿಗೆ ತಂದು ಮಾರಾಟ ಮಾಡಬೇಕಿತ್ತು. ಈಗ ಆ ನಿರ್ಬಂಧ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.