ಬೆಂಗಳೂರು: ‘ನಮ್ಮ ಮೆಟ್ರೊ’ ಪ್ರಯಾಣಿಕರ ಅನುಕೂಲಕ್ಕಾಗಿ ಉಬರ್ ಕಂಪನಿಯು ತನ್ನ ಆ್ಯಪ್ ಮೂಲಕ ಮೆಟ್ರೊ ಟಿಕೆಟ್ ಖರೀದಿಸುವ ಸೌಲಭ್ಯ ಆರಂಭಿಸಿದೆ.
ಪ್ರಯಾಣಿಕರು ಉಬರ್ ಆ್ಯಪ್ ಮೂಲಕ ಯುಪಿಐ ಬಳಸಿ ಮೆಟ್ರೊ ಟಿಕೆಟ್ ಖರೀದಿ ಮಾಡಿದರೆ, ಕ್ಯೂಆರ್ ಕೋಡ್ ಸಿಗುತ್ತದೆ. ಅದರ ಸಹಾಯದಿಂದ ಪ್ರಯಾಣಿಸಬಹುದು. ಈ ಸೇವೆ ಕಲ್ಪಿಸಲು ಒಎನ್‌ಡಿಸಿ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಉಬರ್ ಇಂಡಿಯಾ ಅಧ್ಯಕ್ಷ ಪ್ರಭಜೀತ್ ಸಿಂಗ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಉಬರ್ ಡೈರೆಕ್ಟ್’ ಎಂಬ ಹೊಸ ಯೋಜನೆಯೊಂದನ್ನು ಕೂಡ ಕಂಪನಿ ಪ್ರಕಟಿಸಿದೆ. ಈ ಯೋಜನೆಯು ಉದ್ದಿಮೆ ನಡೆಸುವವರಿಗೆ ಅನುಕೂಲವಾಗಲಿದೆ. ಉದ್ದಿಮೆಯಿಂದ ಉದ್ದಿಮೆಗೆ ಸರಕು ಸಾಗಿಸಲು ಈ ಯೋಜನೆಯನ್ನು ಬಳಸಬಹುದು ಎಂದರು.
ಈ ಎರಡೂ ಸೌಲಭ್ಯಗಳು ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಆಧರಿಸಿವೆ. ಒಂದೇ ಆ್ಯಪ್‌ನಲ್ಲಿ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ಸೇವೆ ಮತ್ತು ವ್ಯಾಪಾರ ಸೇವೆಗಳನ್ನು ಒದಗಿಸಲಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ಉಬರ್ ಬಸ್ ಸೇವೆ ಆರಂಭಿಸಲು ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ಅನುಮತಿ ನೀಡಿದ ಬಳಿಕ ಉಬರ್ ಬಸ್ ಸೇವೆ ಆರಂಭಿಸಲಾಗುವುದು ಎಂದು ಪ್ರಭಜೀತ್ ಸಿಂಗ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.