ADVERTISEMENT

ತೆರಿಗೆ ವಂಚನೆ: ವಿಡಿಎ ಆದಾಯದ ಮೇಲೆ ಸಿಬಿಡಿಟಿ ಕಣ್ಣು

ಪಿಟಿಐ
Published 14 ಜೂನ್ 2025, 15:30 IST
Last Updated 14 ಜೂನ್ 2025, 15:30 IST
<div class="paragraphs"><p>.</p></div>

.

   

ನವದೆಹಲಿ: ಕ್ರಿಪ್ಟೊ ಕರೆನ್ಸಿಗಳಲ್ಲಿ ಹಣ ಹೂಡಿಕೆ ಮಾಡಿ ತೆರಿಗೆ ವಂಚನೆ ಮಾಡಿರುವುದು ಹಾಗೂ ಲೆಕ್ಕಕ್ಕೆ ಸಿಗದಿರುವ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಪ್ರಕರಣಗಳ ಬಗ್ಗೆ ಕೇಂದ್ರ ನೇರ ತೆರಿಗೆಗಳ ಮಂಡಳಿಯು (ಸಿಬಿಡಿಟಿ) ತನಿಖೆ ನಡೆಸುತ್ತಿದೆ.

ವರ್ಚುವಲ್ ಡಿಜಿಟಲ್ ಆಸ್ತಿ (ವಿಡಿಎ) ವಹಿವಾಟುಗಳಲ್ಲಿ ತೊಡಗಿದ್ದು, ಆದಾಯ ತೆರಿಗೆ ಕಾಯ್ದೆಗೆ ಅನುಗುಣವಾಗಿ ನಡೆದುಕೊಳ್ಳದೆ ಇರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಆದಾಯ ತೆರಿಗೆ ಕಾಯ್ದೆ – 1961ರ ಸೆಕ್ಷನ್ 115ಬಿಬಿಎಚ್‌ ಪ್ರಕಾರ, ವಿಡಿಎ ವರ್ಗಾವಣೆಯಿಂದ ಸಿಗುವ ಆದಾಯಕ್ಕೆ ಶೇಕಡ 30ರಷ್ಟು ತೆರಿಗೆ (ಮತ್ತು ಅನ್ವಯವಾಗುವ ಸರ್ಚ್‌ಚಾರ್ಜ್‌ ಹಾಗೂ ಸೆಸ್) ಪಾವತಿ ಮಾಡಬೇಕು. ಇಂತಹ ಆಸ್ತಿಗಳ ಖರೀದಿಗೆ ಆಗುವ ವೆಚ್ಚ ಹೊರತುಪಡಿಸಿದರೆ ಬೇರೆ ಯಾವುದೇ ವೆಚ್ಚವನ್ನು ಕಡಿತ ಮಾಡಿಕೊಂಡು ತೆರಿಗೆ ಪಾವತಿಸುವುದಕ್ಕೆ ಅವಕಾಶ ಇಲ್ಲ.

ಅಲ್ಲದೆ, ವಿಡಿಎ ಹೂಡಿಕೆಯಿಂದ ಆಗಬಹುದಾದ ನಷ್ಟವನ್ನು ಬೇರೆ ಯಾವುದೇ ವರಮಾನದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು, ಮುಂದಿನ ವರ್ಷಗಳಿಗೆ ವರ್ಗಾಯಿಸಿಕೊಳ್ಳಲು ಕೂಡ ಅವಕಾಶ ಇಲ್ಲ.

ವಿಡಿಎಗಳಿಂದ ಪಡೆದಿರುವ ಆದಾಯವನ್ನು ವೈಯಕ್ತಿಕ ತೆರಿಗೆ ವಿವರದ ಜೊತೆ ಸಲ್ಲಿಸದೆ ಇರುವ ಮೂಲಕ ಹಲವರು ಕಾಯ್ದೆಯನ್ನು ಉಲ್ಲಂಘಿಸಿರುವುದು ದತ್ತಾಂಶ ವಿಶ್ಲೇಷಣೆಯಿಂದ ಗೊತ್ತಾಗಿದೆ ಎಂದು ಮೂಲಗಳು ಹೇಳಿವೆ.

ತೆರಿಗೆ ಪಾವತಿದಾರರು ಸಲ್ಲಿಸಿದ ಆದಾಯ ತೆರಿಗೆ ವಿವರವನ್ನು ವರ್ಚುವಲ್ ಆಸ್ತಿ ಸೇವಾದಾತರು (ಇವರನ್ನು ಕ್ರಿಪ್ಟೊ ವಿನಿಮಯ ಸೇವಾದಾತರು ಎಂದೂ ಗುರುತಿಸಲಾಗುತ್ತದೆ) ಸಲ್ಲಿಸಿರುವ ಟಿಡಿಎಸ್ ವಿವರಗಳ ಜೊತೆ ತಾಳೆ ಮಾಡಲಾಗುತ್ತಿದೆ. ವಿವರ ನೀಡುವಲ್ಲಿ ವಿಫಲರಾಗಿರುವವರನ್ನು ಗುರುತಿಸಿ, ಅವರನ್ನು ಇನ್ನಷ್ಟು ಪರಿಶೀಲನೆಗೆ ಗುರಿಪಡಿಸಬಹುದು ಎಂದು ಮೂಲಗಳು ಮಾಹಿತಿ ನೀಡಿವೆ.

ವಿವರವನ್ನು ಸರಿಯಾಗಿ ನೀಡದೆ ಇರುವ ಸಹಸ್ರಾರು ಮಂದಿ ಸಿಬಿಡಿಟಿ ಈಚೆಗೆ ಇ–ಮೇಲ್‌ ಕಳುಹಿಸಿದೆ. ತಾವು ಸಲ್ಲಿಸಿರುವ ಆದಾಯ ತೆರಿಗೆ ವಿವರಗಳನ್ನು ಪರಿಶೀಲಿಸುವಂತೆ ಹೇಳಿದೆ. ವಿಡಿಎ ವಹಿವಾಟಿನಿಂದ ಬಂದ ಯಾವುದೇ ಆದಾಯವನ್ನು ತಿಳಿಸಬೇಕು ಎಂದು ಸೂಚಿಸಿದೆ ಎಂದು ಗೊತ್ತಾಗಿದೆ.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.