ADVERTISEMENT

₹42,270 ಕೋಟಿ ಬ್ಯಾಂಕ್‌ ಠೇವಣಿಗೆ ವಾರಸುದಾರರೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2023, 15:58 IST
Last Updated 19 ಡಿಸೆಂಬರ್ 2023, 15:58 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ದೇಶದಲ್ಲಿ ಸರ್ಕಾರಿ ಹಾಗೂ ಖಾಸಗಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ವಾರಸುದಾರರು ಇಲ್ಲದ ಠೇವಣಿಯು 2023ರ ಮಾರ್ಚ್‌ ಅಂತ್ಯದ ವೇಳೆಗೆ ಶೇ 28ರಷ್ಟು ಏರಿಕೆಯಾಗಿ, ₹42,270 ಕೋಟಿಗೆ ತಲುಪಿದೆ ಎಂದು ಕೇಂದ್ರ ಸರ್ಕಾರವು ಮಂಗಳವಾರ ರಾಜ್ಯಸಭೆಗೆ ತಿಳಿಸಿದೆ.

ಈ ಪೈಕಿ ಸರ್ಕಾರಿ ವಲಯದ ಬ್ಯಾಂಕ್‌ಗಳಲ್ಲಿ ₹36,185 ಕೋಟಿ ಇದ್ದರೆ, ಖಾಸಗಿ ಬ್ಯಾಂಕ್‌ಗಳಲ್ಲಿ ₹6,087 ಕೋಟಿ ಠೇವಣಿ ಇದೆ. 2022ರ ಹಣಕಾಸು ವರ್ಷದಲ್ಲಿ ಈ ಎರಡೂ ವಲಯದ ಬ್ಯಾಂಕ್‌ಗಳಲ್ಲಿ ವಾರಸುದಾರರು ಇಲ್ಲದ ಠೇವಣಿಯು ₹32,934 ಕೋಟಿ ಇತ್ತು.

ADVERTISEMENT

ವಾರಸುದಾರರು ಇಲ್ಲದ ಠೇವಣಿಗಳ ಪ್ರಮಾಣ ತಗ್ಗಿಸಲು ಹಾಗೂ ಸರಿಯಾದ ಹಕ್ಕುದಾರರಿಗೆ ಠೇವಣಿ ಮರಳಿಸಲು ಆರ್‌ಬಿಐ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಭಾಗವತ್‌ ಕರಾಡ್‌ ಅವರು, ಸಂಸತ್‌ನ ಮೇಲ್ಮನೆಗೆ ಸಲ್ಲಿಸಿರುವ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ. 

ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿರುವ (ಪಿಎಂಇಜಿಪಿ) ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‌ಗಳಲ್ಲಿ ವಸೂಲಾಗದ ಸಾಲದ (ಎನ್‌ಪಿಎ) ಮೊತ್ತ ₹5.71 ಲಕ್ಷ ಕೋಟಿ (2023ರ ಮಾರ್ಚ್‌ 31ರ ವೇಳೆಗೆ) ಇದೆ. ಎನ್‌ಪಿಎ ಅನುಪಾತ ಶೇ 3.87ರಷ್ಟು ಆಗಿದೆ. ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ನಿರಂತರವಾಗಿ ಇಳಿಕೆಯಾಗಿದೆ ಎಂದು ಆರ್‌ಬಿಐ ಅಂಕಿ–ಅಂಶ ಉಲ್ಲೇಖಿಸಿ ಸಚಿವರು ಮಾಹಿತಿ ನೀಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.