ADVERTISEMENT

Union Budget 2022 | ಆರ್ಥಿಕತೆಗೆ ಚೈತನ್ಯ ನೀಡುವುದೇ ‘ಡಿಜಿಟಲ್’ ಬಜೆಟ್‌?

ಅನ್ನಪೂರ್ಣ ಸಿಂಗ್
Published 1 ಫೆಬ್ರುವರಿ 2022, 14:07 IST
Last Updated 1 ಫೆಬ್ರುವರಿ 2022, 14:07 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ಸರ್ಕಾರಕ್ಕೆ ಈ ವರ್ಷ ಉತ್ತಮ ಆದಾಯ ಸಂಗ್ರಹವಾದ ಹರ್ಷದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ತಮ್ಮ 4ನೇ ಬಜೆಟ್‌ ಮಂಡಿಸಿದರು. 90 ನಿಮಿಷಗಳ ಅವರ ಭಾಷಣದಲ್ಲಿ ಕೋವಿಡ್ ಪೀಡಿತ ಆರ್ಥಿಕತೆಗೆ ಚೈತನ್ಯ ನೀಡುವ ಮತ್ತು ಮುಂದಿನ 25 ವರ್ಷಗಳಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆ ವ್ಯಕ್ತವಾಗಿದೆ.

ಕೋವಿಡ್‌ ಸಾಂಕ್ರಾಮಿಕದ ಕಾರಣಕ್ಕೆ ಖಾಸಗಿ ಹೂಡಿಕೆಯು ವೇಗ ಪಡೆದುಕೊಂಡಿಲ್ಲ. ಹೀಗಾಗಿ ಸಾರ್ವಜನಿಕ ಹೂಡಿಕೆಯು ಖಾಸಗಿ ಹೂಡಿಕೆಯನ್ನು ಪ್ರೋತ್ಸಾಹಿಸುತ್ತದೆ ಎಂದು ಹೇಳಿರುವ ನಿರ್ಮಲಾ, ಈ ಬಜೆಟ್‌ನಲ್ಲಿ ಬಂಡವಾಳ ವೆಚ್ಚವನ್ನು ಶೇಕಡಾ 35 ರಷ್ಟು (₹7.50 ಲಕ್ಷ ಕೋಟಿಗೆ) ಹೆಚ್ಚಿಸಿರುವುದಾಗಿ ತಿಳಿಸಿದ್ದಾರೆ.

‘ವಾಣಿಜ್ಯೋದ್ಯಮ ಅವಕಾಶಗಳನ್ನು ಔಪಚಾರಿಕಗೊಳಿಸುವ ದೃಷ್ಟಿಯಿಂದ, ಉದ್ಯೋಗಶೀಲತೆ, ಇ-ಕೌಶಲ್ಯ, ಎಂಎಸ್‌ಎಂಇ ವಲಯದಲ್ಲಿ ಉದ್ಯೋಗ ಸೃಷ್ಟಿ ಮತ್ತು ನೇಮಕಾತಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ‘ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರರಾದ ತಪತಿ ಘೋಶ್‌ ಹೇಳಿದ್ದಾರೆ.

ADVERTISEMENT

ಆದಾಗ್ಯೂ 2022-2023ರಲ್ಲಿ ಜಿಡಿಪಿಯ ಶೇ. 6.4 ರಷ್ಟು ವಿತ್ತೀಯ ಕೊರತೆಯಾಗಲಿದೆ. ಬ್ಲೂಮ್‌ ಬರ್ಗ್‌ ಸಮೀಕ್ಷೆಯಲ್ಲಿ 6.1 ರಷ್ಟು ಕೊರತೆ ಎದುರಾಗಬಹುದು ಎಂದು ಹೇಳಲಾಗಿತ್ತು. ಆದರೆ, ಅದು ಮತ್ತಷ್ಟು ಹೆಚ್ಚಾಗಿದೆ. ಸರ್ಕಾರವು ಪ್ರಸಕ್ತ ಹಣಕಾಸು ವರ್ಷವನ್ನು ಶೇ. 6.9 ರಷ್ಟು ಕೊರತೆಯೊಂದಿಗೆ ಪೂರ್ಣಗೊಳಿಸಲಿದೆ. ಆದರೆ, ಶೇ 6.8ರಲ್ಲಿ ಪೂರ್ಣಗೊಳಿಸಬೇಕು ಎಂಬ ಗುರಿಯನ್ನು ಸರ್ಕಾರ ಹೊಂದಿತ್ತು. ಆದರೂ, 2025–26ರ ಹೊತ್ತಿಗೆ ವಿತ್ತೀಯ ಕೊರತೆಯನ್ನು ಶೇ 4.5ಕ್ಕೆ ಇಳಿಸುವ ವಿಶ್ವಾಸವನ್ನು ನಿರ್ಮಲಾ ಹೊಂದಿದ್ದಾರೆ.

ತಮ್ಮ ಬಜೆಟ್‌ನ ನಾಲ್ಕು ಕೇಂದ್ರೀಕೃತ ಅಂಶಗಳನ್ನು ನಿರ್ಮಲಾ ಪ್ರಸ್ತಾಪಿಸಿದ್ದಾರೆ. ‘ಪಿಎಂ ಗತಿ ಶಕ್ತಿ’ ಯೋಜನೆಯಡಿಯಲ್ಲಿ ಸಾರಿಗೆ ವಲಯದಲ್ಲಿ ಖಾಸಗಿ ಹೂಡಿಕೆ, ಸರ್ವಾಂಗೀಣ ಅಭಿವೃದ್ಧಿ, ಉತ್ಪಾದಕತೆಯ ವೃದ್ಧಿ, ಆರ್ಥಿಕ ಹೂಡಿಕೆಯನ್ನು ಹೆಚ್ಚಿಸುವುದು ಆ ನಾಲ್ಕು ಪ್ರಮುಖ ಉದ್ದೇಶಗಳು ಎಂದು ನಿರ್ಮಲಾ ತಿಳಿಸಿದರು.

ಪ್ರಸ್ತಾವಿತ ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯೂ ಕೂಡ 7 ಪ್ರಧಾನ ಅಂಶಗಳನ್ನು ಒಳಗೊಂಡಿದೆ. ರಸ್ತೆಗಳು, ರೈಲ್ವೆಗಳು, ವಿಮಾನ ನಿಲ್ದಾಣಗಳು, ಬಂದರುಗಳು, ಸಮೂಹ ಸಾರಿಗೆ, ಜಲಮಾರ್ಗಗಳು ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯ ಆ ಏಳು ಪ್ರಧಾನ ಅಂಶಗಳಾಗಿವೆ.

ಬಂಡವಾಳ ವೆಚ್ಚದ ಕುರಿತ ನಿರ್ಮಲಾ ಅವರ ಘೋಷಣೆಯ ಬಗ್ಗೆ ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಗಾರ್ಗ್ ಮಾತನಾಡಿದ್ದಾರೆ. ‘5.5 ರಿಂದ 7.5 ಲಕ್ಷ ಕೋಟಿಗೆ ಬಂಡವಾಳ ಹೂಡಿಕೆಯನ್ನು ಹೆಚ್ಚಿಸುವುದು ತುಂಬಾ ದೊಡ್ಡ ಸಂಗತಿ. ಆದರೆ, ಅದೂ ಪ್ರತಿಫಲಿಸುತ್ತಿರುವುದು ಎರಡು ಕ್ಷೇತ್ರಗಳಲ್ಲಿ ಮಾತ್ರ. ಒಂದು ರಾಜ್ಯಗಳಿಗೆ ಒಂದು ಲಕ್ಷ ಕೋಟಿ ಸಾಲ ನೀಡುವುದು, ಇನ್ನೊಂದು ಸಾರ್ವಜನಿಕ ವಲಯಕ್ಕೆ ನೀಡಲಾಗುವ ಗ್ರೀನ್‌ ಬಾಂಡ್‌ಗಳಲ್ಲಿ. ಆದರೆ, ಸರ್ಕಾರದ ಬಂಡವಾಳ ವೆಚ್ಚದಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ’ ಎಂದು ಅವರು ತಿಳಿಸಿದ್ದಾರೆ.


2024 ರ ಸಾರ್ವತ್ರಿಕ ಚುನಾವಣೆಗೆ ಸೆಮಿಫೈನಲ್ ಎಂದು ಹೇಳಲಾಗುತ್ತಿರುವ ಪಂಚ ರಾಜ್ಯಗಳ ಚುನಾವಣೆಗಳ ಮತದಾನ ಬಾಕಿ ಇದೆ. ಐದು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದೆಯಾದರೂ ನಿರ್ಮಲಾ ಸೀತಾರಾಮನ್‌ ಅವರು ತಮ್ಮ ಬಜೆಟ್‌ನಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಸಮತೋಲನ ಕಾಯ್ದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

2022-23ರಲ್ಲಿ ಹೆದ್ದಾರಿ ಜಾಲವನ್ನು 25,000 ಕಿಲೋಮೀಟರ್‌ಗಳಷ್ಟು ವಿಸ್ತರಿಸುವುದು, 100 ಹೊಸ ಕಾರ್ಗೋ ಟರ್ಮಿನಲ್‌ಗಳ ರಚನೆ ಮತ್ತು ಹೊಸ ಮೆಟ್ರೋ ರೈಲು ವ್ಯವಸ್ಥೆಗೆ ಧನಸಹಾಯ ನೀಡುವ ಪ್ರಸ್ತಾವವನ್ನು ಅವರು ತಮ್ಮ ಬಜೆಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಈ ಮೂಲಕ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಅವರು ಒತ್ತು ನೀಡಿದ್ದಾರೆ.


ಪ್ರಧಾನ ಮಂತ್ರಿ ವಸತಿ ಯೋಜನೆಗೆ 2022–23ರರಲ್ಲಿ ₹48,000 ಕೋಟಿ ಮಂಜೂರು ಮಾಡಲಾಗಿದೆ. 80 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ಒದಿಗಿಸುವುದಾಗಿ ಸರ್ಕಾರ ಹೇಳಿದೆ. 3.8 ಕೋಟಿ ಕುಟುಂಬಗಳಿಗೆ ನಲ್ಲಿ ನೀರು ಪೂರೈಸಲು 60,000 ಕೋಟಿ ನೀಡುವುದಾಗಿ ಹೇಳಲಾಗಿದೆ.


ಸಂಸತ್ತಿನಲ್ಲಿ ಕ್ರಿಪ್ಟೋ-ಕರೆನ್ಸಿ ಮಸೂದೆಯನ್ನು ಪರಿಚಯಿಸುವ ಚರ್ಚೆಗಳು ನಡೆಯುತ್ತಿದೆ. ಇದರ ಮಧ್ಯೆಯೇ ಬಂದ ಬಜೆಟ್‌ನಲ್ಲಿ, ಡಿಜಿಟಲ್ ಆಸ್ತಿಗಳ ಆದಾಯ ವರ್ಗಾವಣೆಯ ಮೇಲೆ ಶೇ 30ರಷ್ಟು ತೆರಿಗೆ ವಿಧಿಸಲಾಗಿದೆ.

ಸಣ್ಣ ಉದ್ಯಮಗಳು ಕೋವಿಡ್‌ ಸಾಂಕ್ರಾಮಿಕದ ಹೊಡತದಿಂದ ಚೇತರಿಸಿಕೊಳ್ಳುವಂತೆ ಮಾಡಲು ಸರ್ಕಾರ ಯೋಜನೆ ರೂಪಿಸಿದೆ. ಎಂಎಸ್‌ಎಂಇಗಳಿಗೆ ಮಾರ್ಚ್ 2023 ರವರೆಗೆ ತುರ್ತು ಸಾಲ ನೀಡಲು ನಿರ್ಧರಿಸಲಾಗಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ 2022ರ ಜನವರಿಯಲ್ಲಿ ದಾಖಲೆ ಮೊತ್ತದ ವರಮಾನ ಸಂಗ್ರಹವಾಗಿದೆ ಎಂದು ನಿರ್ಮಲಾ ತಮ್ಮ ಭಾಷಣದಲ್ಲಿ ಹೇಳಿದರು. ಜನವರಿಯಲ್ಲಿ ₹1,40,986 ಕೋಟಿ ಸಂಗ್ರಹವಾಗಿದ್ದು, ಜಿಎಸ್‌ಎಸ್‌ಟಿ ಆರಂಭವಾದಾಗಿನಿಂದ ಈ ವರೆಗೆ ಸಂಗ್ರಹವಾದ ದಾಖಲೆ ಮೊತ್ತವಿದು ಎಂದು ಅವರು ತಿಳಿಸಿದರು.

ಈ ಬಾರಿಯೂ ಕಾಗದರಹಿತ, ಡಿಜಿಟಲ್ ಬಜೆಟ್ ಮಂಡಿಸಿದ್ದಾರೆ ನಿರ್ಮಲಾ. ಬಜೆಟ್‌ನಲ್ಲಿ ಡಿಜಿಟಲ್ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಡಿಜಿಟಲ್ ಬ್ಯಾಂಕಿಂಗ್, ರೂಪಾಯಿ, ವಿಶ್ವವಿದ್ಯಾಲಯ, ಅಂಚೆಕಚೇರಿಗಳಿಗೆ ಡಿಜಿಟಲ್ ಸೌಕರ್ಯ, ಸ್ಥಳೀಯ ಭಾಷೆಗಳಲ್ಲೂ ಡಿಜಿಟಲ್ ಕಲಿಕೆ ಸೇರಿದಂತೆ ಹಲವು ಯೋಜನೆಗಳನ್ನು ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.