ADVERTISEMENT

15 ದಿನಗಳಲ್ಲಿ ಮೂರನೇ ಬಾರಿ ಕೈಕೊಟ್ಟ UPI: ವಹಿವಾಟಿಗೆ ತೊಡಕು; ಜನರ ಆಕ್ರೋಶ

ಪಿಟಿಐ
Published 12 ಏಪ್ರಿಲ್ 2025, 9:35 IST
Last Updated 12 ಏಪ್ರಿಲ್ 2025, 9:35 IST
<div class="paragraphs"><p>ಯುಪಿಐ ಮೂಲಕ ಪಾವತಿ</p></div>

ಯುಪಿಐ ಮೂಲಕ ಪಾವತಿ

   

ನವದೆಹಲಿ: ಮೊಬೈಲ್‌ನಿಂದ ಸರಳವಾಗಿ ಹಣ ಪಾವತಿ ಮಾಡುವ ಯುಪಿಐ ಸೌಲಭ್ಯವು ದೇಶದ ಹಲವು ಭಾಗಗಳಲ್ಲಿ ಶನಿವಾರ ಲಭ್ಯವಾಗದ ಕಾರಣ, ದಿನನಿತ್ಯದ ವಹಿವಾಟಿಗೆ ತೊಡಕಾಯಿತು. ಇದರಿಂದ ವರ್ತಕರು ಮತ್ತು ಗ್ರಾಹಕರು ಪರದಾಡಿದರು.

ಗೂಗಲ್‌ ಪೇ, ಪೇಟಿಎಂ, ಫೋನ್‌ ಪೇ ಸೇರಿದಂತೆ ಡಿಜಿಟಲ್‌ ಪಾವತಿ ಆ್ಯಪ್‌ಗಳ ಕಾರ್ಯ ಕೆಲಕಾಲ ಸ್ಥಗಿತಗೊಂಡಿತ್ತು. 

ADVERTISEMENT

ಮಾರ್ಚ್‌ 26 ಹಾಗೂ ಏ. 2ರಂದು ಇಂಥದ್ದೇ ಸಮಸ್ಯೆ ಸೃಷ್ಟಿಯಾಗಿತ್ತು. ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ನಿಯಂತ್ರಣದಲ್ಲಿರುವ ಎನ್‌ಪಿಸಿಐ ನಿರ್ವಹಿಸುವ ತ್ವರಿತ ಪಾವತಿಯ ಯುಪಿಐ ವ್ಯವಸ್ಥೆಯು ಕಳೆದ 15 ದಿನಗಳಲ್ಲಿ ಮೂರನೇಬಾರಿ ಸಮಸ್ಯೆ ಕಾಣಿಸಿಕೊಂಡಿದೆ. 

ಡೌನ್‌ಡಿಟೆಕ್ಟರ್‌ ಮಾಹಿತಿ ಅನ್ವಯ, ಶನಿವಾರ ಬೆಳಿಗ್ಗೆ 11.30ರಲ್ಲಿ ಯುಪಿಐ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಬಳಕೆದಾರರಿಂದ ವ್ಯಕ್ತವಾದವು. ಈ ಕುರಿತು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರತಿಕ್ರಿಯಿಸಿರುವ ಎನ್‌ಪಿಸಿಐ, ದೇಶದ ಹಲವೆಡೆ ಪಾವತಿ ಸಮಸ್ಯೆ ಎದುರಾಗಿದೆ. ಇದನ್ನು ತ್ವರಿತಗತಿಯಲ್ಲಿ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಹೇಳಿದೆ.

ಐಎಂಪಿಎಸ್‌ ತಂತ್ರಜ್ಞಾನದ ಆಧಾರದಲ್ಲಿ ಯುಪಿಐ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಎರಡು ಬ್ಯಾಂಕ್ ಖಾತೆಗಳ  ನಡುವೆ ಮೊಬೈಲ್ ಮೂಲಕವೇ ತ್ವರಿತವಾಗಿ ಹಣ ಪಾವತಿಸುವ ವ್ಯವಸ್ಥೆ ಇದಾಗಿದೆ. ಇದಕ್ಕಾಗಿ ಬಳಕೆದಾರರು ಯಾವುದೇ ಹೆಚ್ಚುವರಿ ಪಾವತಿಯ ಅಗತ್ಯವಿಲ್ಲ. 

ಸ್ಥಳೀಯ ಅಂಗಡಿಗಳಲ್ಲಿ ಸಣ್ಣ ಮೊತ್ತದ ಖರೀದಿಗೆ ಯುಪಿಐ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಆಟೊಪೇ ಆಯ್ಕೆಯೂ ಇರುವುದರಿಂದ ಬಹಳಷ್ಟು ಬಳಕೆದಾರರು ತಮ್ಮ ಪಾವತಿಯನ್ನು ಮೊದಲೇ ನಿರ್ಧರಿಸಬಹುದಾಗಿದೆ. ಹೀಗಾಗಿ ಯುಪಿಐ ವಹಿವಾಟು ಅತ್ಯಂತ ಸರಳವಾಗಿರುವುದರಿಂದ ಬಹುತೇಕರು ಬಳಸುತ್ತಿದ್ದಾರೆ.

ಮಾರ್ಚ್ ತಿಂಗಳಲ್ಲಿ ಯುಪಿಐ ವಹಿವಾಟು ದಾಖಲೆಯ ₹24.77 ಲಕ್ಷ ಕೋಟಿಗೆ ತಲುಪಿತ್ತು. ಫೆಬ್ರುವರಿಗೆ ಹೋಲಿಸಿದಲ್ಲಿ ಇದು ಶೇ 12.7ರಷ್ಟು (₹21.96 ಲಕ್ಷ ಕೋಟಿ) ಹೆಚ್ಚಳವಾಗಿದೆ. 

ಯುಪಿಐ ಸಮಸ್ಯೆ ಕುರಿತು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕಿಂತ ನಗದು ವಹಿವಾಟೇ ಮೇಲು ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.