ADVERTISEMENT

‘ಅಗ್ಗದ ತೈಲ: ಆರ್ಥಿಕತೆಗೆ ಚೇತರಿಕೆ’

ಸಂಸದೀಯ ಸಮಿತಿ ಮುಂದೆ ಉರ್ಜಿತ್‌ ಹೇಳಿಕೆ

ಪಿಟಿಐ
Published 27 ನವೆಂಬರ್ 2018, 20:00 IST
Last Updated 27 ನವೆಂಬರ್ 2018, 20:00 IST
ಉರ್ಜಿತ್‌ ಪಟೇಲ್‌
ಉರ್ಜಿತ್‌ ಪಟೇಲ್‌   

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್‌ ಉರ್ಜಿತ್ ಪಟೇಲ್‌ ಅವರು ಮಂಗಳವಾರ ಇಲ್ಲಿ ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿ ಮುಂದೆ ಹಾಜರಾಗಿ ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

‘ನಾಲ್ಕು ವರ್ಷಗಳ ನಂತರ ಕಚ್ಚಾ ತೈಲ ಅಗ್ಗವಾಗುತ್ತಿರುವುದರಿಂದ ದೇಶಿ ಆರ್ಥಿಕತೆಗೆ ಉತ್ತೇಜನ ಸಿಗಲಿದೆ. ಅರ್ಥ ವ್ಯವಸ್ಥೆಯ ಆಧಾರ ಸ್ತಂಭಗಳು ಸದೃಢವಾಗಿವೆ. ಸಾಲ ನೀಡಿಕೆ ಪ್ರಮಾಣವು ಶೇ 15ರಷ್ಟು ಹೆಚ್ಚಾಗಿದೆ. 2016ರಲ್ಲಿ ನಡೆದ ನೋಟು ರದ್ದತಿಯ ನಿರ್ಧಾರವು ಆರ್ಥಿಕತೆ ಮೇಲೆ ತಾತ್ಕಾಲಿಕ ಪರಿಣಾಮ ಬೀರಿತ್ತು’ ಎಂದು ಅವರು ಸಮಿತಿಗೆ ತಿಳಿಸಿದ್ದಾರೆ.

ಆರ್‌ಬಿಐ ಕಾಯ್ದೆ–1934ರ ಸೆಕ್ಷನ್‌ 7ರ ಬಳಕೆಗೆ ಕೇಂದ್ರ ಸರ್ಕಾರವು ಮುಂದಾಗಿರುವುದು, ವಸೂಲಾಗದ ಸಾಲ (ಎನ್‌ಪಿಎ) ಹೆಚ್ಚಳ, ಕೇಂದ್ರೀಯ ಬ್ಯಾಂಕ್‌ನ ಸ್ವಾಯತ್ತತೆ ಒಳಗೊಂಡಂತೆ ವಿವಾದಾತ್ಮಕ ವಿಷಯಗಳ ಕುರಿತ ನಿರ್ದಿಷ್ಟ ಪ್ರಶ್ನೆಗಳಿಗೆ ಪಟೇಲ್‌ ಅವರು ಉತ್ತರ ನೀಡಿಲ್ಲ.

ADVERTISEMENT

ಪಟೇಲ್‌ ಅವರು ಸಮಿತಿ ಮುಂದೆ ದೇಶಿ ಮತ್ತು ಜಾಗತಿಕ ಆರ್ಥಿಕತೆಯ ಚಿತ್ರಣ ನೀಡಿದರು. ದೇಶಿ ಆರ್ಥಿಕತೆ ಬಗ್ಗೆ ಅವರು ಆಶಾವಾದ ವ್ಯಕ್ತಪಡಿಸಿದರು. ಅನೇಕ ವಿಷಯಗಳ ಬಗ್ಗೆ ಅವರು 31 ಸದಸ್ಯರ ಸಮಿತಿಗೆ ಲಿಖಿತ ಉತ್ತರವನ್ನೂ ನೀಡಿದ್ದಾರೆ. ಕೆಲ ವಿವಾದಾತ್ಮಕ ಪ್ರಶ್ನೆಗಳಿಗೆ ಅವರು ಸ್ಪಷ್ಟವಾಗಿ ಏನನ್ನೂ ಹೇಳದೆ ನುಣುಚಿಕೊಂಡರು ಎಂದು ಮೂಲಗಳು ತಿಳಿಸಿವೆ.

ಆರ್ಥಿಕ ಸಂಕಷ್ಟಗಳಿಂದ ಎದುರಾಗಬಹುದಾದ ಆಘಾತವನ್ನು ಸಮರ್ಥವಾಗಿ ಎದುರಿಸಲು ಬ್ಯಾಂಕಿಂಗ್‌ ವಲಯದ ಹಣಕಾಸು ಸಾಮರ್ಥ್ಯವನ್ನು ಸುಧಾರಿಸುವ ಅಂತರ ರಾಷ್ಟ್ರೀಯ ಬ್ಯಾಂಕಿಂಗ್‌ ಮಾನದಂಡವಾದ ‘ಬಾಸೆಲ್‌ –3’ ಜಾರಿ ಕುರಿತೂ ಸದಸ್ಯರು ಉರ್ಜಿತ್‌ ಅವರನ್ನು ಪ್ರಶ್ನಿಸಿದರು.

‘ಈ ಜಾಗತಿಕ ಮಾನದಂಡಗಳನ್ನು ಪಾಲಿಸುವುದಾಗಿ ಭಾರತ ‘ಜಿ–20’ ಸಂಘಟನೆಗೆ ವಾಗ್ದಾನ ನೀಡಿದೆ’ ಎಂದರು.

ಮೀಸಲು ನಿಧಿಯ ಪ್ರಮಾಣ, ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ ವಲಯಕ್ಕೆ ಸುಲಭವಾಗಿ ಸಾಲ ವಿತರಣೆ ಸಂಬಂಧ ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ಮಧ್ಯೆ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ ಉರ್ಜಿತ್‌ ಪಟೇಲ್‌ ಅವರು ಸ್ಥಾಯಿ ಸಮಿತಿ ಮುಂದೆ ಹಾಜರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.