ADVERTISEMENT

ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರ: ಮೊದಲ ಸ್ಥಾನದಲ್ಲಿ ಅಮೆರಿಕ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2023, 3:13 IST
Last Updated 17 ಏಪ್ರಿಲ್ 2023, 3:13 IST
   

ನವದೆಹಲಿ: ಭಾರತದೊಂದಿಗೆ ಅತಿ ಹೆಚ್ಚು ವ್ಯಾಪಾರ ನಡೆಸಿದ ದೇಶಗಳ ಸಾಲಿನಲ್ಲಿ 2022–23ರಲ್ಲಿಯೂ ಅಮೆರಿಕ ಮೊದಲ ಸ್ಥಾನ ಪಡೆದುಕೊಂಡಿದೆ. 2021–22ರಲ್ಲಿ ಮೊದಲ ಬಾರಿಗೆ ಅಮೆರಿಕವು ಚೀನಾವನ್ನು ಹಿಂದಕ್ಕಿ ಮೊದಲ ಸ್ಥಾನಕ್ಕೇರಿತ್ತು.

ಕೇಂದ್ರ ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿರುವ ತಾತ್ಕಾಲಿಕ ಮಾಹಿತಿಯ ಪ್ರಕಾರ, 2022–23ರಲ್ಲಿ ಭಾರತ ಮತ್ತು ಅಮೆರಿಕದ ಮಧ್ಯೆ ₹10.54 ಲಕ್ಷ ಕೋಟಿ ಮೌಲ್ಯದ ದ್ವಿಪಕ್ಷೀಯ ವ್ಯಾಪಾರ ನಡೆದಿದೆ. 2021–22ರಲ್ಲಿ ಆಗಿದ್ದ ವ್ಯಾಪಾರಕ್ಕೆ ಹೋಲಿಸಿದರೆ ಶೇ 7.65ರಷ್ಟು ಹೆಚ್ಚಾಗಿದೆ.

ಭಾರತದಿಂದ ಅಮೆರಿಕಕ್ಕೆ 2021–22ರಲ್ಲಿ ₹6.24 ಲಕ್ಷ ಕೋಟಿ ಮೌಲ್ಯದ ಸರಕು ಮತ್ತು ಸೇವೆಗಳ ರಫ್ತು ಆಗಿತ್ತು. ಇದು 2022–23ರಲ್ಲಿ ₹6.42 ಲಕ್ಷ ಕೋಟಿಗೆ ಅಂದರೆ ಶೇ 2.81ರಷ್ಟು ಹೆಚ್ಚಾಗಿದೆ. ಆಮದು ವಹಿವಾಟು ಸಹ ಶೇ 16ರಷ್ಟು ಹೆಚ್ಚಾಗಿದ್ದು ₹4.11 ಲಕ್ಷ ಕೋಟಿಗೆ ತಲುಪಿದೆ.

ADVERTISEMENT

2022–23ರಲ್ಲಿ ಭಾರತ ಮತ್ತು ಚೀನಾ ಮಧ್ಯೆ ದ್ವಿಪಕ್ಷೀಯ ವ್ಯಾಪಾರವು ಶೇ 1.5ರಷ್ಟು ಇಳಿಕೆ ಕಂಡು ₹9.33 ಲಕ್ಷ ಕೋಟಿಯಷ್ಟಾಗಿದೆ. 2021–22ರಲ್ಲಿ ₹9.46 ಲಕ್ಷ ಕೋಟಿ ಮೌಲ್ಯದ ವ್ಯಾಪಾರ ನಡೆದಿತ್ತು.

ಚೀನಾಕ್ಕೆ ರಫ್ತು ಶೇ 28ರಷ್ಟು ಇಳಿಕೆ ಆಗಿದ್ದು, ಚೀನಾದಿಂದ ಆಮದು ಪ್ರಮಾಣವು ಶೇ 4.16ರಷ್ಟು ಹೆಚ್ಚಾಗಿದೆ. ವ್ಯಾಪಾರ ಕೊರತೆ ಅಂತರವು ₹5.97 ಲಕ್ಷ ಕೋಟಿಯಿಂದ ₹6.82 ಲಕ್ಷ ಕೋಟಿಗೆ ಏರಿಕೆ ಆಗಿದೆ.

ಅಮೆರಿಕಕ್ಕೆ ಔಷಧ, ಎಂಜಿನಿಯರಿಂಗ್‌, ಹರಳು ಮತ್ತು ಚಿನ್ನಾಭರಣ ರಫ್ತು ಹೆಚ್ಚಾಗುತ್ತಿದೆ ಎಂದು ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ಅಧ್ಯಕ್ಷ ಎ. ಶಕ್ತಿವೇಲ್‌ ಹೇಳಿದ್ದಾರೆ.

ಯುಎಇ, ಸೌದಿ ಅರೇಬಿಯಾ ಮತ್ತು ಸಿಂಗಪುರ ದೇಶಗಳು ಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.

ಭಾರತ ಮತ್ತು ಅಮೆರಿಕವು ಆರ್ಥಿಕ ಒಪ್ಪಂದಗಳನ್ನು ಇನ್ನಷ್ಟು ಬಲಪಡಿಸಿಕೊಳ್ಳುತ್ತಿವೆ. ಹೀಗಾಗಿ ಭಾರತ ಮತ್ತು ಅಮೆರಿಕ ಮಧ್ಯೆ ದ್ವಿಪಕ್ಷೀಯ ವ್ಯಾಪಾರವು ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯನ್ನು ತಜ್ಞರು ಹೊಂದಿದ್ದಾರೆ.

ಜಾಗತಿಕ ಕಂಪನಿಗಳು ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುತ್ತಿದ್ದು ಭಾರತವನ್ನೂ ಒಗೊಂಡು ಅನ್ಯ ದೇಶಗಳೊಂದಿಗೂ ವಹಿವಾಟು ನಡೆಸುತ್ತಿವೆ ಎಂದು ಒಕ್ಕೂಟದ ಉಪಾಧ್ಯಕ್ಷ ಖಾಲಿದ್‌ ಖಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.