
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
ಬೆಂಗಳೂರು: ಭಾರತದಿಂದ ಅಮೆರಿಕಕ್ಕೆ ಆಮದು ಆಗುವ ಸರಕುಗಳಿಗೆ ವಿಧಿಸುತ್ತಿದ್ದ ಶೇಕಡ 25ರಷ್ಟು ಸುಂಕವನ್ನು ಶೇ 18ಕ್ಕೆ ಇಳಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿನ್ನೆಯಷ್ಟೆ ನಿರ್ಧಾರ ಕೈಗೊಂಡಿದ್ದರು. ಈ ನಿರ್ಧಾರವನ್ನು ಪ್ರಧಾನಿ ಮೋದಿ ಸ್ವಾಗತಿಸಿದ್ದರು.
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಂಡಿದೆ ಎಂದು ಟ್ರಂಪ್ ಘೋಷಣೆ ಮಾಡಿದ್ದರು. ಇದರಿಂದ ಭಾರತ–ಅಮೆರಿಕದ ನಡುವಿನ ವ್ಯಾಪಾರದ ಒಟ್ಟು ಮೌಲ್ಯ ₹45 ಲಕ್ಷ ಕೋಟಿಗೆ ಏರುವ ಸಂಭವ ಇದೆ.
ಇನ್ನು ವಿಶೇಷ ಎಂದರೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಂಡಿರುವುದು ಎರಡು ದೇಶಗಳ ನಡುವಿನ ಎಲೆಕ್ಟ್ರಾನಿಕ್ಸ್ ಉದ್ಯಮದ ವ್ಯಾಪಾರದ ಗಾತ್ರವೊಂದೇ ಬರೋಬ್ಬರಿ ₹9 ಲಕ್ಷ ಕೋಟಿಗೆ ಏರುವ ನಿರೀಕ್ಷೆಯನ್ನು ಹೊಂದಲಾಗಿದೆ.
ಸದ್ಯ (2024–25) ಭಾರತ–ಅಮೆರಿಕದ ನಡುವಿವ ಎಲೆಕ್ಟ್ರಾನಿಕ್ಸ್ ಉದ್ಯಮದ ವ್ಯಾಪಾರದ ಗಾತ್ರ ₹3.27 ಲಕ್ಷ ಕೋಟಿಗೆ ಏರಿಕೆಯಾಗಿದೆ. ಹೊಸ ಒಪ್ಪಂದಗಳಿಂದ ₹9 ಲಕ್ಷ ಕೋಟಿಗೇರುವ ನಿರೀಕ್ಷೆ ಹೊಂದಲಾಗಿದೆ.
ಇತ್ತೀಚಿನ ದಿನಗಳಲ್ಲಿ ಚೀನಾ ನಂತರ ಭಾರತವು ಎಲೆಕ್ಟ್ರಾನಿಕ್ಸ್ ಉದ್ಯಮಗಳ ಹಬ್ ಆಗಿ ಪರಿವರ್ತನೆಯಾಗುತ್ತಿದೆ. ಈ ಉದ್ಯಮಗಳ ಉತ್ಪನ್ನಗಳಿಗೆ ಅಮೆರಿಕವು ಭಾರತದ ಮುಂಚೂಣಿ ಗ್ರಾಹಕ.
ಯೂರೂಪಿಯನ್ ಯೂನಿಯನ್ ಜೊತೆ ‘ಮದರ್ ಆಫ್ ಆಲ್ ಡೀಲ್ಸ್’ ಒಪ್ಪಂದದ ನಂತರ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಅಂತಿಮಗೊಂಡಿರುವುದು ಹಾಗೂ ಫೆಬ್ರುವರಿ 1ರ ಬಜೆಟ್‌ನ ನೋಟಗಳು ಭಾರತದ ಆರ್ಥಿಕ ಪ್ರಗತಿಯನ್ನು ಮುಂಚೂಣಿಯಲ್ಲಿರಿಸಿವೆ.
ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯವು ನೇರವಾಗಿ 20 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ. ಇದು ಬರುವ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ. ಇದಕ್ಕೆ ಕಾರಣ ಹೊಸ ಒಪ್ಪಂದಗಳು ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ಮೊದಲು ಡೊನಾಲ್ಡ್ ಟ್ರಂಪ್ ಅವರ ಸುಂಕದ ಬೆದರಿಕೆಗಳಿಂದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯ ಆತಂಕಕ್ಕೆ ಒಳಗಾಗಿತ್ತು. ಇದೀಗ ಈ ವಲಯಕ್ಕೆ ಆವರಿಸಿದ್ದ ಕರಾಳ ಛಾಯೆ ಸದ್ಯ ಮರೆಯಾಗಿದೆ ಎನ್ನಲಾಗಿದೆ.
ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದಿಂದ ಪ್ರಮುಖವಾಗಿ ಭಾರತದಲ್ಲಿ ಐಫೋನ್ ತಯಾರಿಕಾ ಚಟುವಟಿಕೆಗೆ ಎದುರಾಗಿದ್ದ ಆತಂಕ ದೂರವಾಗಿದೆ. ಈ ಮೊದಲು ಭಾರತದಲ್ಲಿ ಐಫೋನ್ ತಯಾರಿಸಿ ನಮಗೆ ಮಾರಿದರೆ ಹೆಚ್ಚುವರಿ ಶೇ 50 ರಷ್ಟು ಸುಂಕ ಹೇರುತ್ತೇವೆ ಎಂದು ಟ್ರಂಪ್ ಗುಡುಗಿದ್ದರು.
ಸದ್ಯ ಒಟ್ಟು ಐಫೋನ್‌ಗಳ ಉತ್ಪಾದನೆಯಲ್ಲಿ ಶೇ 25 ರಷ್ಟು ಭಾರತದಲ್ಲಿ ತಯಾರಾಗುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.