ADVERTISEMENT

ಶೂನ್ಯಕ್ಕಿಂತಲೂ ಕಡಿಮೆಯಾದ ಕಚ್ಚಾ ತೈಲ ದರ: ಇತಿಹಾಸದಲ್ಲೇ ಮೊದಲ ಮಹಾ ಕುಸಿತ

ರಾಯಿಟರ್ಸ್
Published 21 ಏಪ್ರಿಲ್ 2020, 5:02 IST
Last Updated 21 ಏಪ್ರಿಲ್ 2020, 5:02 IST
ಕಚ್ಚಾ ತೈಲ ದರ ಕುಸಿತ
ಕಚ್ಚಾ ತೈಲ ದರ ಕುಸಿತ   

ನ್ಯೂಯಾರ್ಕ್‌: ಕೊರೊನಾ ವೈರಸ್‌ ಸೋಂಕು ವ್ಯಾಪಿಸುವುದನ್ನು ನಿಯಂತ್ರಿಸುವ ಸಲುವಾಗಿ ಜಗತ್ತಿನಾದ್ಯಂತ ಕೋಟ್ಯಂತರ ಜನರು ಮನೆಯಲ್ಲಿದ್ದಾರೆ. ಬಹುತೇಕ ರಾಷ್ಟ್ರಗಳು ದಿಗ್ಬಂಧನ ಅನುಸರಿಸುತ್ತಿವೆ. ಇದರಿಂದಾಗಿ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದ್ದು, ತೈಲ ಬೇಡಿಕೆಯೇ ಇಲ್ಲದಂತಾಗಿ. ಈ ಎಲ್ಲವೂ ಜಾಗತಿಕ ಕಚ್ಚಾ ತೈಲ ಬೇಡಿಕೆಯ ಮೇಲೆ ಪರಿಣಾಮ ಬೀರಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ ಕಚ್ಚಾ ತೈಲ ದರ ಶೂನ್ಯಕ್ಕಿಂತಲೂ ಕಡಿಮೆಯಾಗಿದೆ.

ಮೇ ಅವಧಿಯ ಅಮೆರಿಕದ ತೈಲ ಫ್ಯೂಚರ್‌ಗಳಿಂದ ಹೂಡಿಕೆದಾರರುದೂರ ಉಳಿಯುತ್ತಿದ್ದಂತೆ ಸೋಮವಾರ ಕಚ್ಚಾ ತೈಲ ದರ ಇತಿಹಾಸದಲ್ಲಿಯೇ ಅತಿ ಕಡಿಮೆ ಬೆಲೆಗೆ ಕುಸಿಯಿತು. ಇದೇ ಮೊದಲ ಬಾರಿಗೆ ದರ ಋಣಾತ್ಮಕ ಮಟ್ಟಕ್ಕೆ ಜಾರಿದೆ. ಪ್ರತಿ ಬ್ಯಾರೆಲ್‌ ಕಚ್ಚಾ ತೈಲ ಶೇ 305ರಷ್ಟು ಅಥವಾ 55.90 ಡಾಲರ್‌ನಷ್ಟು ಇಳಿಕೆಯಾಗಿ ಮೈನಸ್‌ (–)37.63 ಡಾಲರ್‌ ತಲುಪಿದೆ. ಬೆಲೆ (–)40.32 ಡಾಲರ್‌ವರೆಗೂ ಕುಸಿದಿತ್ತು.

ತೈಲ ಪೂರೈಕೆ ಹೆಚ್ಚಳವಾಗಿದೆ ಮತ್ತು ಬೇಡಿಕೆ ಕುಸಿತದ ಕಾರಣಕ್ಕೆ ಮಾರುಕಟ್ಟೆಯಲ್ಲಿ ತೈಲದ ಹರಿವು ಹೆಚ್ಚಿದೆ. ಜಾಗತ್ತಿನಾದ್ಯಂತ ಕೊರೊನಾ ವೈರಸ್‌ ಸಾಂಕ್ರಾಮಿಕದಿಂದ ತೈಲ ಬೇಡಿಕೆ ಕನಿಷ್ಠ ಶೇ 30ರಷ್ಟು ಕಡಿಮೆಯಾಗಿದೆ. ಸಂಗ್ರಹಾಗಾರಗಳು ಭರ್ತಿಯಾಗುತ್ತಿದ್ದು, ಹೆಚ್ಚುವರಿ ತೈಲ ಸಂಗ್ರಹಿಸಿ ಇಡಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಕಚ್ಚಾ ತೈಲ ಬೆಲೆಯು ಇತಿಹಾಸದಲ್ಲಿಯೇ ಅತಿ ಕಡಿಮೆ ಮಟ್ಟಕ್ಕೆ ಜಾರಿದೆ.

ADVERTISEMENT

ಕಚ್ಚಾ ತೈಲ ರಫ್ತು ಮಾಡುವ ದೇಶಗಳ ಸಂಘಟನೆ ಮತ್ತು ಅದರ ಮಿತ್ರ ಪಕ್ಷಗಳು (ಒಪಿಇಸಿ +) ಉತ್ಪಾದನೆ ತಗ್ಗಿಸಲು ತೆಗೆದುಕೊಂಡಿರುವ ನಿರ್ಧಾರವು ತೈಲ ಮಾರುಕಟ್ಟೆಯಲ್ಲಿ ಸಮತೋಲನ ಸಾಧಿಸಲು, ಬೆಲೆಯಲ್ಲಿ ತೀಕ್ಷ್ಣ ಕುಸಿತ ತಡೆಯಲು ನೆರವಾಗಿಲ್ಲ. ಅಮೆರಿಕದ ತೈಲ ಮಾರುಕಟ್ಟೆಯ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೇಟ್‌ (ಡಬ್ಲ್ಯುಟಿಐ) ಮೇ ಫ್ಯೂಚರ್‌ಗಳ ಅವಧಿ ಮಂಗಳವಾರ ಕೊನೆಯಾಗಲಿದ್ದು, ಖರೀದಿದಾರರು ತೈಲ ಸಂಗ್ರಹವನ್ನು ಪಡೆಯಬಹುದಾಗಿರುತ್ತದೆ. ಆದರೆ, ಕೆಲವರು ಮಾತ್ರವೇ ತೈಲ ಸಂಗ್ರಹಕ್ಕೆ ಮುಂದಾಗುತ್ತಾರೆ. ಒಮ್ಮೆಲೆ ಮಾರಾಟದ ಒತ್ತಡದಿಂದ ಬೆಲೆ ಋಣಾತ್ಮಕ ಮಟ್ಟಕ್ಕೆ ತಲುಪಿದೆ. ಆದರೆ, ಜೂನ್‌ ಅವಧಿಯ ಕಾಂಟ್ರ್ಯಾಕ್ಟ್‌ ಶೇ 16ರಷ್ಟು ಇಳಿಕೆಯೊಂದಿಗೆ ಪ್ರತಿ ಬ್ಯಾರೆಲ್‌ಗೆ 20.43 ಡಾಲರ್‌ ತಲುಪಿದೆ.

ಅಮೆರಿಕ ಇಂಧನ ಇಲಾಖೆ ಮಾಹಿತಿ ಪ್ರಕಾರ, ಓಕ್ಲಾಹೊಮಾ ಸಂಗ್ರಹಗಾರದಲ್ಲಿ ತೈಲ ಸಂಗ್ರಹವು ಈಗಾಗಲೇ ಶೇ 69ರಷ್ಟು ಭರ್ತಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಂಗ್ರಹ ಪೂರ್ಣ ಭರ್ತಿಯಾಗುವುದು ಖಚಿತವಾಗಿದೆ ಹಾಗೂ ಇನ್ನೂ ಕೆಲವು ತಿಂಗಳು ಭರ್ತಿಯಾಗಿಯೇ ಇರಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಜಗತ್ತಿನಾದ್ಯಂತ ನಿತ್ಯದ ತೈಲ ಬಳಕೆ ಅಂದಾಜು 10 ಕೋಟಿ ಬ್ಯಾರೆಲ್‌ಗಳು, ಅದಕ್ಕೆ ತಕ್ಕಂತೆ ಪೂರೈಕೆಯೂ ಇರುತ್ತದೆ. ಆದರೆ, ಈಗ ಬಳಕೆ ಪ್ರಮಾಣ ಶೇ 30ರಷ್ಟು ಕುಸಿದಿದೆ. ಪೂರೈಕೆ ಎಂದಿನಂತೆಯೇ ಮುಂದುವರಿದಿದೆ.

ಕಚ್ಚಾ ತೈಲ ಸಂಗ್ರಹವು ವಾರದಲ್ಲಿ ಶೇ 9ರಷ್ಟು ಹೆಚ್ಚಳವಾಗಿದ್ದು, ಒಟ್ಟು 61 ದಶಲಕ್ಷ ಬ್ಯಾರೆಲ್‌ ತಲುಪಿರುವುದಾಗಿ ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಜಗತ್ತಿನ ಪ್ರಮುಖ ತೈಲ ಉತ್ಪಾದಕರು ಉತ್ಪಾದನಾ ಪ್ರಮಾಣವನ್ನು ನಿತ್ಯ 9.7 ದಶ ಲಕ್ಷ ಬ್ಯಾರೆಲ್‌ಗಳಿಗೆ ಕಡಿತಗೊಳಿಸಲು ಸಮ್ಮತಿಸಿದ್ದಾರೆ. ಬೇಡಿಕೆ ಕುಸಿದಿರುವುದರಿಂದ ಪೂರೈಕೆಯನ್ನು ನಿಯಂತ್ರಿಸಲು ಈ ಕ್ರಮ ಅತ್ಯಗತ್ಯವಾಗಿದೆ. ಆದರೆ, ಮೇ ವರೆಗೂ ಉತ್ಪಾದನೆ ಆರಂಭವಾಗುವುದಿಲ್ಲ.

ಬಸ್‌, ರೈಲು, ವಿಮಾನ ಪ್ರಯಾಣಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ವಿಶ್ವದಾದ್ಯಂತ ಇಂಧನಗಳ ಬೇಡಿಕೆ ಗಮನಾರ್ಹವಾಗಿ ಕುಸಿದಿದೆ. ಜಾಗತಿಕ ಆರ್ಥಿಕತೆಗೆ ಭಾರಿ ಹೊಡೆತ ನೀಡಿರುವ ಲಾಕ್‌ಡೌನ್‌ ಯಾವಾಗ ತೆರವಾಗಲಿದೆ ಎನ್ನುವುದನ್ನು ತೈಲ ಪೂರೈಕೆದಾರರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.