ADVERTISEMENT

ರಷ್ಯಾ ಮೇಲೆ ನಿರ್ಬಂಧ: ತೈಲ ಪೂರೈಕೆಗೆ ಅಡ್ಡಿ ನಿರೀಕ್ಷೆ

ಪಿಟಿಐ
Published 23 ಜನವರಿ 2025, 15:46 IST
Last Updated 23 ಜನವರಿ 2025, 15:46 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ರಷ್ಯಾದ ತೈಲ ವ್ಯಾಪಾರ ವಲಯದ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧಗಳು ಭಾರತಕ್ಕೆ ಪೂರೈಕೆಯಾಗುವ ಕಚ್ಚಾ ತೈಲದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಮಾರ್ಚ್‌ನಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗುವ ನಿರೀಕ್ಷೆಯಿದೆ ಎಂದು ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಬಿಪಿಸಿಎಲ್‌) ಹೇಳಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಅತಿದೊಡ್ಡ ತೈಲ ರಫ್ತುದಾರ ರಾಷ್ಟ್ರಗಳ ಪೈಕಿ ರಷ್ಯಾವೂ ಒಂದಾಗಿದೆ. ಸದ್ಯ ಉಕ್ರೇನ್‌ ಮೇಲೆ ನಡೆಸುತ್ತಿರುವ ಯುದ್ಧ ಸ್ಥಗಿತಗೊಳಿಸಲು ಮುಂದಾಗಿಲ್ಲ. ಹಾಗಾಗಿ, ರಷ್ಯಾವನ್ನು ಆರ್ಥಿಕವಾಗಿ ಮತ್ತಷ್ಟು ಕುಗ್ಗಿಸುವ ನಿಟ್ಟಿನಲ್ಲಿ ಅಲ್ಲಿನ ತೈಲ ವ್ಯಾಪಾರವನ್ನು ಗುರಿಯಾಗಿಟ್ಟುಕೊಂಡು ಅಮೆರಿಕವು ನಿರ್ಬಂಧಗಳನ್ನು ಹೇರಿದೆ ಎಂದು ಹೇಳಲಾಗಿದೆ.

ರಷ್ಯಾದ ತೈಲ ಉತ್ಪಾದಕ ಕಂಪನಿಗಳಾದ ಗಾಜ್‌ಪ್ರೊಮ್‌ ನೆಫ್ಟ್‌ ಮತ್ತು ಸುರ್ಗುಟ್ನೆಫ್ಟೆಗ್ಯಾಸ್‌ಗೆ ನಿರ್ಬಂಧ ವಿಧಿಸಲಾಗಿದೆ. ರಷ್ಯಾದಿಂದ ಇತರೆ ದೇಶಗಳಿಗೆ ತೈಲ ಪೂರೈಸುವ 183 ಸರಕು ಸಾಗಣೆ ಹಡಗುಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ತೈಲ ವ್ಯಾಪಾರಿಗಳು, ತೈಲ ವಲಯದ ಸೇವಾ ಪೂರೈಕೆದಾರರು, ಟ್ಯಾಂಕರ್‌ ಮಾಲೀಕರು, ವ್ಯವಸ್ಥಾಪಕರು, ವಿಮಾ ಕಂಪನಿಗಳು ಮತ್ತು ಇಂಧನ ವಲಯದ ಅಧಿಕಾರಿಗಳಿಗೂ ನಿರ್ಬಂಧದ ಬಿಸಿ ತಟ್ಟಿದೆ.

ADVERTISEMENT

ಭಾರತದ ತೈಲ ಸಂಸ್ಕರಣಾಗಾರರು, ಮಾರ್ಚ್‌ ತಿಂಗಳಿನಲ್ಲಿ ತೈಲ ಪೂರೈಕೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸುತ್ತಿದ್ದ ವೇಳೆಯೇ ಈ ನಿರ್ಬಂಧ ವಿಧಿಸಲಾಗಿದೆ ಎಂದು ಹೇಳಲಾಗಿದೆ.

‘ಈಗಾಗಲೇ, ಜನವರಿ ಮತ್ತು ಫೆಬ್ರುವರಿಯಲ್ಲಿ ತೈಲ ಪೂರೈಕೆಗೆ ಸಂಬಂಧಿಸಿದಂತೆ ಮಾತುಕತೆ ಮುಗಿದಿದೆ. ಮಾರ್ಚ್‌ನಲ್ಲಿ ನಮಗೆ ನಿರೀಕ್ಷಿತ ಪ್ರಮಾಣದಲ್ಲಿ ಸರಕು ಸಾಗಣೆ ಹಡಗುಗಳ ಸೇವೆ ಲಭಿಸುವ ಸಾಧ್ಯತೆಯಿಲ್ಲ’ ಎಂದು ಬಿಪಿಸಿಎಲ್‌  ನಿರ್ದೇಶಕ (ಹಣಕಾಸು) ವೆತ್ಸ ರಾಮಕೃಷ್ಣ ಗುಪ್ತಾ ತಿಳಿಸಿದ್ದಾರೆ.

‘ಮಾರ್ಚ್‌ನಲ್ಲಿ ತೈಲ ಪೂರೈಕೆಯಲ್ಲಿ ಶೇ 20ರಷ್ಟು ಕೊರತೆಯಾಗಬಹುದು’ ಎಂದು ಹೇಳಿದ್ದಾರೆ.

‘ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಲಭ್ಯತೆ ಹೆಚ್ಚಿದೆ. ಪಶ್ಚಿಮ ಏಷ್ಯಾ ರಾಷ್ಟ್ರಗಳಿಂದ ಈ ಕೊರತೆ ನೀಗಿಸಲು ಕ್ರಮವಹಿಸಲಾಗುವುದು’ ಎಂದು ತಿಳಿಸಿದ್ದಾರೆ.

2024ರಲ್ಲಿ ರಷ್ಯಾವು ಪ್ರತಿದಿನ 17 ಲಕ್ಷ ಬ್ಯಾರೆಲ್‌ನಷ್ಟು ಕಚ್ಚಾತೈಲವನ್ನು ಭಾರತಕ್ಕೆ ಪೂರೈಕೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.