ADVERTISEMENT

ಅಮೆರಿಕ ನಿರ್ಬಂಧ: ಪಶ್ಚಿಮ ಏಷ್ಯಾ ದೇಶಗಳಿಂದ ಕಚ್ಚಾ ತೈಲ ಖರೀದಿ ಸಾಧ್ಯತೆ

ಪಿಟಿಐ
Published 24 ಅಕ್ಟೋಬರ್ 2025, 15:43 IST
Last Updated 24 ಅಕ್ಟೋಬರ್ 2025, 15:43 IST
ಕಚ್ಚಾ ತೈಲ
ಕಚ್ಚಾ ತೈಲ   

ನವದೆಹಲಿ: ರಷ್ಯಾದ ಎರಡು ಪ್ರಮುಖ ತೈಲ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಇದರಿಂದಾಗಿ, ಕಚ್ಚಾ ತೈಲ ಆಮದಿನಲ್ಲಿ ಉಂಟಾಗುವ ಕೊರತೆಯನ್ನು ಸರಿದೂಗಿಸಿಕೊಳ್ಳಲು ಭಾರತೀಯ ತೈಲ ಸಂಸ್ಕರಣಾ ಕಂಪನಿಗಳು ಪಶ್ಚಿಮ ಏಷ್ಯಾ, ಲ್ಯಾಟಿನ್ ಅಮೆರಿಕ ಮತ್ತು ಅಮೆರಿಕದಿಂದ ಕಚ್ಚಾ ತೈಲ ಖರೀದಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ.

ಕಚ್ಚಾ ತೈಲ ಉತ್ಪನ್ನ ಮಾಡುವ ರಷ್ಯಾದ ಅತಿದೊಡ್ಡ ಕಂಪನಿಗಳಾದ ‘ರೊಸ್ನೆಫ್ಟ್‌’ ಮತ್ತು ‘ಲುಕಾಯಿಲ್‌’ ಮೇಲೆ ಅಕ್ಟೋಬರ್ 22ರಂದು ಅಮೆರಿಕ ನಿರ್ಬಂಧ ವಿಧಿಸಿದೆ. ಆ ಮೂಲಕ, ಈ ಕಂಪನಿಗಳು ಮತ್ತು ಅವುಗಳ ಅಂಗ ಸಂಸ್ಥೆಗಳೊಂದಿಗೆ ಅಮೆರಿಕದ ಕಂಪನಿಗಳು ಮತ್ತು ವ್ಯಕ್ತಿಗಳು ವಹಿವಾಟು ನಡೆಸುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಅವುಗಳಿಂದ ಅಮೆರಿಕದ್ದಲ್ಲದ ಕಂಪನಿಗಳು ತೈಲ ಖರೀದಿಸಿದರೆ ಅಂತಹ ಸಂಸ್ಥೆಗಳೂ ನಿರ್ಬಂಧದ ಪರಿಣಾಮವನ್ನು ಎದುರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

ರಷ್ಯಾದ ಈ ಎರಡೂ ಕಂಪನಿಗಳ ಜತೆಗಿನ ವಹಿವಾಟುಗಳನ್ನು ನವೆಂಬರ್‌ 21ರೊಳಗೆ ಅಂತ್ಯಗೊಳಿಸಬೇಕು ಎಂದು ಅಮೆರಿಕ ಹೇಳಿದೆ.

ADVERTISEMENT

ಪ್ರಸ್ತುತ ಭಾರತವು ರಷ್ಯಾದಿಂದ ನಿತ್ಯ 17 ಲಕ್ಷ ಬ್ಯಾರಲ್‌ನಷ್ಟು ಕಚ್ಚಾ ತೈಲ ಖರೀದಿಸುತ್ತಿದೆ. ಈ ಪೈಕಿ ‘ರೊಸ್ನೆಫ್ಟ್‌’ ಮತ್ತು ‘ಲುಕಾಯಿಲ್‌’ನಿಂದಲೇ 12 ಲಕ್ಷ ಬ್ಯಾರಲ್ ತೈಲವನ್ನು ಖರೀದಿ ಮಾಡುತ್ತಿದೆ. ಖಾಸಗಿ ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್‌ ಮತ್ತು ನಯಾರಾ ಎನರ್ಜಿ ಕಂಪನಿಗಳು ಈ ತೈಲದಲ್ಲಿ ಹೆಚ್ಚಿನ ಪ್ರಮಾಣವನ್ನು ಖರೀದಿಸುತ್ತಿವೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡುತ್ತಿವೆ.  

‘ರಷ್ಯಾದಿಂದ ನವೆಂಬರ್‌ 21ರವರೆಗೆ ನಿಗದಿಯಂತೆ ಕಚ್ಚಾ ತೈಲ ಆಮದು ಆಗಲಿದೆ. ಆ ನಂತರ ತೈಲ ಖರೀದಿ ಪ್ರಮಾಣ ಇಳಿಕೆಯಾಗಲಿದೆ. ಅಮೆರಿಕ ವಿಧಿಸಿರುವ ನಿರ್ಬಂಧದ ಪರಿಣಾಮಗಳನ್ನು ತಪ್ಪಿಸಿಕೊಳ್ಳಲು ಭಾರತದ ತೈಲ ಸಂಸ್ಕರಣಾಗಾರಗಳು ಪ್ರಯತ್ನಿಸುತ್ತಿವೆ’ ಎಂದು ಕೆಪ್ಲೆರ್‌ನ ಸಂಶೋಧನಾ ವಿಶ್ಲೇಷಕ (ಸಂಸ್ಕರಣೆ ಮತ್ತು ಮಾಡೆಲಿಂಗ್) ಸುಮಿತ್ ರಿಟೋಲಿಯಾ ಹೇಳಿದ್ದಾರೆ. 

‘ದಿನಕ್ಕೆ 5 ಲಕ್ಷ ಬ್ಯಾರಲ್‌ನಂತೆ 25 ವರ್ಷ ಕಚ್ಚಾ ತೈಲ ಪೂರೈಕೆ ಮಾಡಲು ರಿಲಯನ್ಸ್‌, ರೊಸ್ನೆಫ್ಟ್‌ ಜೊತೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ನಯಾರಾ ಎನರ್ಜಿ, ರಷ್ಯಾದ ತೈಲ ಕಂಪನಿಗಳ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿದೆ. ಅದಕ್ಕಿರುವ ಆಯ್ಕೆ ಕಡಿಮೆ. ಆದರೂ, ಸಂಸ್ಕರಣಾಗಾರರು ಮಧ್ಯವರ್ತಿಗಳ ಮೂಲಕ ಖರೀದಿಯನ್ನು ಮುಂದುವರಿಸಬಹುದು’ ಎಂದು ಅವರು ಹೇಳಿದ್ದಾರೆ. 

‍ಕಚ್ಚಾ ತೈಲ ಆಮದಿನಲ್ಲಿ ಉಂಟಾಗುವ ಕೊರತೆಯನ್ನು ಸರಿದೂಗಿಸಿಕೊಳ್ಳಲು ಭಾರತವು ಪಶ್ಚಿಮ ಏಷ್ಯಾ, ಬ್ರೆಜಿಲ್‌, ಲ್ಯಾಟಿನ್ ಅಮೆರಿಕ, ಪಶ್ಚಿಮ ಆಫ್ರಿಕಾ, ಕೆನಡಾ ಮತ್ತು ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುವ ನಿರೀಕ್ಷೆಯಿದೆ. ‍

ಅಮೆರಿಕ ವಿಧಿಸಿರುವ ನಿರ್ಬಂಧಗಳು ಭಾರತದ ತೈಲ ಖರೀದಿ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದ್ದು, ಭಾರತವು ಬೇರೆ ದೇಶದಿಂದ ತೈಲ ಖರೀದಿಸಿದರೆ ವೆಚ್ಚ ಹೆಚ್ಚಳವಾಗಬಹುದು ಎಂದು ಅವರು ವಿವರಿಸಿದ್ದಾರೆ. 

ರಷ್ಯಾದಿಂದ ತೈಲ ಖರೀದಿಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಇತರೆ ಪಾಶ್ಚಿಮಾತ್ಯ ದೇಶಗಳು ವಿಧಿಸಿರುವ ನಿರ್ಬಂಧಗಳನ್ನು ಪಾಲಿಸಲಾಗುವುದು
ರಿಲಯನ್ಸ್ ಇಂಡಸ್ಟ್ರೀಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.