ಕೋಲ್ಕತ್ತ: ಭಾರತದ ಸರಕುಗಳ ಮೇಲೆ ಅಮೆರಿಕ ವಿಧಿಸಿರುವ ಅಧಿಕ ಸುಂಕವು ದೇಶದ ಜಿಡಿಪಿ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು ಎಂದು ಕ್ರಿಸಿಲ್ ಇಂಟೆಲಿಜೆನ್ಸ್ ತನ್ನ ಸೆಪ್ಟೆಂಬರ್ ತಿಂಗಳ ವರದಿಯಲ್ಲಿ ಹೇಳಿದೆ.
ಈ ಸುಂಕವು ದೇಶದ ಸರಕು ರಫ್ತು ಮತ್ತು ಹೂಡಿಕೆ ಮೇಲೆ ಪರಿಣಾಮ ಬೀರಲಿದೆ. ಆದರೂ, ದೇಶದಲ್ಲಿ ಹಣದುಬ್ಬರ ಇಳಿಕೆ ಮತ್ತು ರೆಪೊ ದರ ಕಡಿತವು ಬೆಳವಣಿಗೆಗೆ ನೆರವಾಗುವ ನಿರೀಕ್ಷೆ ಇದೆ ಎಂದು ಹೇಳಿದೆ.
ಪ್ರಸಕ್ತ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 7.8ರಷ್ಟಾಗಿತ್ತು. ಇದು 15 ತಿಂಗಳ ಗರಿಷ್ಠ ಮಟ್ಟ. ಇದೇ ಅವಧಿಯಲ್ಲಿ ನಾಮಿನಲ್ ಜಿಡಿಪಿ ಶೇ 10.8ರಿಂದ ಶೇ 8.8ಕ್ಕೆ ಇಳಿದಿದೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರ ಶೇ 3.5ಕ್ಕೆ ಇಳಿಯುವ ನಿರೀಕ್ಷೆ ಇದೆ. ಇದು ಕಳೆದ ಆರ್ಥಿಕ ವರ್ಷದಲ್ಲಿ ಶೇ 4.6ರಷ್ಟಿತ್ತು.
ಉತ್ತಮ ಕೃಷಿ ಚಟುವಟಿಕೆಯಿಂದ ಆಹಾರ ಪದಾರ್ಥಗಳ ಹಣದುಬ್ಬರವು ನಿಯಂತ್ರಣದಲ್ಲಿ ಇರುವ ಸಾಧ್ಯತೆ ಇದೆ. ಕಚ್ಚಾ ತೈಲ ಮತ್ತು ಸರಕುಗಳ ಬೆಲೆ ನಿಯಂತ್ರಣದಲ್ಲಿ ಇದೆ. ಇದು ಆಹಾರೇತರ ವಸ್ತುಗಳ ಹಣದುಬ್ಬರ ಪ್ರಮಾಣವನ್ನು ತಗ್ಗಿಸುವ ನಿರೀಕ್ಷೆ ಇದೆ. ಅಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತೊಮ್ಮೆ ರೆಪೊ ದರ ಕಡಿತ ಮಾಡುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.