ಮೋಹನದಾಸ್ ಪೈ
ನವದೆಹಲಿ: ಎಚ್–1ಬಿ ವೀಸಾ ಶುಲ್ಕವನ್ನು ತೀವ್ರವಾಗಿ ಹೆಚ್ಚಿಸಿರುವ ಅಮೆರಿಕದ ಕ್ರಮವು, ಮುಂದಿನ ದಿನಗಳಲ್ಲಿ ಅಮೆರಿಕದ ಕಂಪನಿಗಳ ಕೆಲಸವನ್ನು ಅಲ್ಲಿಂದ ಹೊರಗೆ ನಿರ್ವಹಿಸುವ ಪ್ರವೃತ್ತಿ ಹೆಚ್ಚುವುದಕ್ಕೆ ಕಾರಣವಾಗಬಹುದು ಎಂದು ಐ.ಟಿ. ಉದ್ಯಮದ ಹಿರಿಯ ಮೋಹನದಾಸ್ ಪೈ ಹೇಳಿದ್ದಾರೆ.
ಕಡಿಮೆ ಸಂಬಳಕ್ಕೆ ಕೆಲಸ ಮಾಡಲು ನೌಕರರನ್ನು ಅಮೆರಿಕಕ್ಕೆ ಕಳುಹಿಸಲು ಕಂಪನಿಗಳು ಎಚ್–1ಬಿ ವೀಸಾ ಯೋಜನೆಯನ್ನು ಬಳಸಿಕೊಳ್ಳುತ್ತಿವೆ ಎಂಬ ಭಾವನೆ ತಪ್ಪು ಎಂದು ಹೇಳಿರುವ ಪೈ, ಈ ವೀಸಾಗಳನ್ನು ಬಳಸಿಕೊಳ್ಳುವ ಪ್ರಮುಖ 20 ಕಂಪನಿಗಳು ನೀಡುವ ವೇತನದ ಸರಾಸರಿ ಮೊತ್ತವು ₹88 ಲಕ್ಷವನ್ನು ಮೀರುತ್ತದೆ ಎಂದು ಹೇಳಿದ್ದಾರೆ.
‘ಅಮೆರಿಕವು ಜಾರಿಗೆ ತಂದಿರುವ ನಿಯಮವು ಈಗಾಗಲೇ ಎಚ್–1ಬಿ ವೀಸಾ ಪಡೆದವರಿಗೆ ಅನ್ವಯ ಆಗುವುದಿಲ್ಲ. ಹೀಗಾಗಿ ನಿಯಮದ ಪರಿಣಾಮವು ಸೀಮಿತವಾಗಿ ಇರಲಿದೆ. ಆದರೆ ಹೊಸದಾಗಿ ಈ ವೀಸಾಕ್ಕೆ ಅರ್ಜಿ ಸಲ್ಲಿಸುವುದು ಕಡಿಮೆ ಆಗಲಿದೆ. ವೀಸಾಕ್ಕಾ 1 ಲಕ್ಷ ಅಮೆರಿಕನ್ ಡಾಲರ್ ಮೊತ್ತವನ್ನು ಯಾರೂ ಪಾವತಿಸುವುದಿಲ್ಲ, ಅಷ್ಟಂತೂ ಸತ್ಯ’ ಎಂದು ಪೈ ಅಭಿಪ್ರಾಯಪಟ್ಟಿದ್ದಾರೆ.
‘ಇನ್ನು ಎಲ್ಲರೂ ತಮ್ಮ ಕೆಲಸಗಳನ್ನು ಅಮೆರಿಕದಿಂದ ಹೊರಗಡೆ ಮಾಡಿಸುವುದನ್ನು ಹೆಚ್ಚಿಸಲಿದ್ದಾರೆ... ಏಕೆಂದರೆ ಅಮೆರಿಕಕ್ಕೆ ನೌಕರರನ್ನು ಕಳುಹಿಸಿ ಕೆಲಸ ಮಾಡಿಸುವ ವೆಚ್ಚವು ಬಹಳ ದುಬಾರಿ... ಅಮೆರಿಕದ ಹೊರಗೇ ಕೆಲಸ ಮಾಡಿಸುವುದು ಮುಂದಿನ ಆರು ತಿಂಗಳು ಅಥವಾ ಒಂದು ವರ್ಷದಲ್ಲಿ ಹೆಚ್ಚಬಹುದು. ಹೀಗಾಗಿ ನಾವು ಕಾದು ನೋಡಬೇಕು’ ಎಂದು ವಿವರಿಸಿದ್ದಾರೆ.
ಭಾರತದ ಐ.ಟಿ. ಸೇವಾ ಕಂಪನಿಗಳು ಎಚ್–1ಬಿ ವೀಸಾ ಮೇಲೆ ಅವಲಂಬನೆ ಹೊಂದಿರುವುದು ಕಡಿಮೆ ಆಗುತ್ತಿದೆ. ಅಮೆರಿಕದ ಮುಂಚೂಣಿ ತಂತ್ರಜ್ಞಾನ ಕಂಪನಿಗಳೇ ಈ ವೀಸಾ ಯೋಜನೆಯನ್ನು ಹೆಚ್ಚು ಬಳಸಿಕೊಳ್ಳುತ್ತಿವೆ ಎಂದು ಪೈ ಅವರು ಹಿಂದಿನಿಂದಲೂ ಹೇಳುತ್ತಿದ್ದಾರೆ.
‘ಪರಿಣಾಮ ಭಾರತಕ್ಕೆ ಸೀಮಿತವಲ್ಲ’
ಭಾರತದ ಕಂಪನಿಗಳು ಪ್ರತಿ ವರ್ಷ ಹೊಸದಾಗಿ 8 ಸಾವಿರದಿಂದ 12 ಸಾವಿರದವರೆಗೆ ಎಚ್–1ಬಿ ವೀಸಾ ಅರ್ಜಿ ಸಲ್ಲಿಸುತ್ತವೆ. ಅಮೆರಿಕ ಸರ್ಕಾರದ ಈಗಿನ ತೀರ್ಮಾನದ ಪರಿಣಾಮವು ಭಾರತದ ಕಂಪನಿಗಳಿಗೆ ಮಾತ್ರವೇ ಸೀಮಿತ ಆಗಿರುವುದಿಲ್ಲ. ಅದು ತಂತ್ರಜ್ಞಾನ ವಲಯದ ಜಾಗತಿಕ ಮಟ್ಟದ ಕಂಪನಿಗಳಾದ ಅಮೆಜಾನ್ ಗೂಗಲ್ ಮೈಕ್ರೊಸಾಫ್ಟ್ ಮೇಲೆಯೂ ಪರಿಣಾಮ ಉಂಟುಮಾಡಲಿದೆ. ಈ ಕಂಪನಿಗಳು ಅಮೆರಿಕಕ್ಕೆ ಅತ್ಯುತ್ತಮ ಪ್ರತಿಭೆಗಳನ್ನು ಕರೆದೊಯ್ಯಲು ಎಚ್–1ಬಿ ವೀಸಾ ಯೋಜನೆಯನ್ನು ದೊಡ್ಡ ಪ್ರಮಾಣದಲ್ಲಿ ಬಳಸಿಕೊಳ್ಳುತ್ತವೆ ಎಂದು ಐ.ಟಿ. ಉದ್ಯಮದ ಪರಿಣತರೊಬ್ಬರು ಹೆಸರು ಬಹಿರಂಗಪಡಿಸಬಾರದು ಎಂಬ ಷರತ್ತಿನೊಂದಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.