ಹೊ ಚಿ ಮಿನ್ ಸಿಟಿ (ವಿಯೆಟ್ನಾಂ): ಭಾರತ–ಚೀನಾ ನಾಗರಿಕತೆಗಳ ಸಂಗಮವಾಗಿರುವ ವಿಯೆಟ್ನಾಂನ ರೋಮಾಂಚನಕಾರಿ ಚರಿತ್ರೆ, ಜೀವನೋತ್ಸಾಹ ತುಂಬಿದ ಸಂಸ್ಕೃತಿ ಮತ್ತು ಹಸಿರು ಹೊದ್ದ ಪ್ರಕೃತಿಯನ್ನು ಆಸ್ವಾದಿಸಲು ಹಾತೊರೆಯುವ ಭಾರತೀಯರಿಗಾಗಿ ‘ವಿಯೆಟ್‌ಜೆಟ್ ಏರ್’ ವಿಮಾನಯಾನ ಸಂಸ್ಥೆಯು ಅಗ್ಗದ ದರದಲ್ಲಿ ಪ್ರಯಾಣದ ಅವಕಾಶ ಕಲ್ಪಿಸಿದೆ.
ಭಾರತದ ಪ್ರಮುಖ ನಗರಗಳಿಂದ ವಿಯೆಟ್ನಾಂನ ಹೆಸರಾಂತ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸಿರುವ ‘ವಿಯೆಟ್‌ಜೆಟ್ ಏರ್’, ಇತ್ತೀಚೆಗೆ ಬೆಂಗಳೂರು–ಹೊ ಚಿ ಮಿನ್ ಸಿಟಿ ನಡುವೆಯೂ ನೇರ ವಿಮಾನಯಾನ ಆರಂಭಿಸಿದೆ. ಎರಡೂ ನಗರಗಳ ಮಧ್ಯೆ ಸದ್ಯ ವಾರಕ್ಕೆ ನಾಲ್ಕು ದಿನ (ಪ್ರತೀ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ) ವಿಮಾನ ಸಂಪರ್ಕ ಲಭ್ಯವಿದೆ.
ಯುದ್ಧದಿಂದ ಕೆಂಪು ನೆಲವಾಗಿದ್ದ ವಿಯೆಟ್ನಾಂನಲ್ಲಿ ಈಗ ಹೇಗೆ ಹಸಿರು ನಳನಳಿಸುತ್ತಿದೆ ಎನ್ನುವುದು ಪ್ರವಾಸ ಪ್ರಿಯರ ಕುತೂಹಲ. ಹೊ ಚಿ ಮಿನ್ ಸಿಟಿಯ ಆಸುಪಾಸಿನಲ್ಲಿಯೇ ಯುದ್ಧದ ಕುರುಹುಗಳನ್ನೂ ಯುದ್ಧಾನಂತರ ದೇಶದ ಒಡಲು ತುಂಬಿಸುತ್ತಿರುವ ಭತ್ತದ ಬಟ್ಟಲನ್ನೂ ನೋಡುವ ಸುಲಭದ ಅವಕಾಶ ಈ ನೇರ ವಿಮಾನಯಾನ ಸೌಲಭ್ಯದಿಂದ ಸಿಕ್ಕಂತಾಗಿದೆ. ಫ್ರೆಂಚ್ ವಸಾಹತು ಆಗಿದ್ದ ಈ ದೇಶದಲ್ಲಿ ಹೆಜ್ಜೆ ಹೆಜ್ಜೆಗೂ ಯುರೋಪ್ ಶೈಲಿಯ ಇಮಾರತುಗಳು ಕಣ್ಣಿಗೆ ಬೀಳುತ್ತವೆ. ವೈವಿಧ್ಯಮಯ ಹಣ್ಣು–ತರಕಾರಿ, ಸಮುದ್ರದ ಆಹಾರಕ್ಕೂ ಈ ದೇಶ ಹೆಸರುವಾಸಿ. ವಿಯೆಟ್ನಾಂ ಜನ ಏಕೆ ಅಷ್ಟೊಂದು ಸಪೂರ ಎಂಬ ಪ್ರಶ್ನೆಗೂ ಇಲ್ಲಿನ ನೋಟಗಳು ಉತ್ತರ ಹೇಳುತ್ತವೆ.
ಬೆಂಗಳೂರಿನ ಪತ್ರಕರ್ತರ ತಂಡದೊಂದಿಗೆ ಮಾತನಾಡಿದ ‘ವಿಯೆಟ್‌ಜೆಟ್ ಏರ್’ ಸಂಸ್ಥೆಯ ಅಂತರರಾಷ್ಟ್ರೀಯ ಸಂಪರ್ಕಾಧಿಕಾರಿ ಕೀವ್ ಡಿಯಂಗ್ (ಎಮಿ), ಭಾರತದ ಬಹುತೇಕ ಪ್ರಮುಖ ನಗರಗಳಿಗೆ ವಿಯೆಟ್ನಾಂ ಸಂಪರ್ಕ ಕಲ್ಪಿಸುವಲ್ಲಿ ಮಧ್ಯಮ ವರ್ಗದವರ ಜೇಬಿಗೆ ಹೊರೆಯಾಗದ ದರ ಮತ್ತು ನೇರ ಸಂಪರ್ಕ ನಮ್ಮ ಆದ್ಯತೆಗಳಾಗಿವೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು. ‘ಪ್ರವಾಸಿಗರು ಮತ್ತು ಉದ್ಯಮಿಗಳಿಗೆ ಅನುಕೂಲವಾಗುವಂತೆ ನಮ್ಮ ಸೌಲಭ್ಯ ಮತ್ತು ವೇಳಾಪಟ್ಟಿ ಇವೆ’ ಎಂದು ಅವರು ಹೇಳಿದರು.
‘ಬೆಂಗಳೂರಿಗಿಂತಲೂ ಮೊದಲು ನವದೆಹಲಿ, ಮುಂಬೈ, ಅಹಮದಾಬಾದ್, ಕೊಚ್ಚಿಯಿಂದ ವಿಯೆಟ್ನಾಂನ ಹನೋಯಿ, ಹೊ ಚಿ ಮಿನ್ ಸಿಟಿ, ಡಾ ನಾಂಗ್ ನಗರಗಳಿಗೆ ವಿಮಾನಯಾನ ಆರಂಭಿಸಲಾಗಿದೆ. ಆ ಯಾನಗಳೆಲ್ಲ ಈಗ ಜನಪ್ರಿಯವಾಗಿವೆ. ಹೈದರಾಬಾದ್‌ನಿಂದಲೂ ಈಗ ವಿಮಾನಯಾನ ಆರಂಭಿಸಲಾಗಿದೆ’ ಎಂದು ಅವರು ವಿವರಿಸಿದರು. ‘ವಿಯೆಟ್‌ಜೆಟ್ ಏರ್’ನ ಭಾರತೀಯ ಮಾರ್ಗಗಳ ಬಹುಪಾಲು ಪೈಲಟ್‌ಗಳು ಭಾರತೀಯರು ಎಂಬ ಗುಟ್ಟನ್ನೂ ಅವರು ಬಿಟ್ಟುಕೊಟ್ಟರು.
ಮಿತವ್ಯಯದ ವಿಮಾನಯಾನ ಕಾರ್ಯಾಚರಣೆಗೆ ಹೆಸರಾಗಿರುವ ‘ವಿಯೆಟ್‌ಜೆಟ್ ಏರ್’, ತನ್ನ ಕಡಿಮೆ ಪ್ರಯಾಣ ದರಗಳಿಂದ ವಿಯೆಟ್ನಾಂನಲ್ಲಿ ಮಾತ್ರವಲ್ಲದೆ ಏಷ್ಯಾದಲ್ಲೂ ಸಂಚಲನ ಮೂಡಿಸಿದೆ. ಸುರಕ್ಷಿತಯಾನದ ಸಂಸ್ಥೆಗಳ ಪಟ್ಟಿಯಲ್ಲೂ ಎತ್ತರದ ಸ್ಥಾನದಲ್ಲಿದೆ. ಭಾರತದಿಂದ ವಿಯೆಟ್ನಾಂಗೆ ಹೋಗುವ ಪ್ರವಾಸಿಗರಿಗಾಗಿ ವಾರಕ್ಕೆ 44 ರೌಂಡ್ ಟ್ರಿಪ್ ವಿಮಾನಗಳ ಸಂಚಾರ ಸೌಲಭ್ಯವನ್ನು ಕಲ್ಪಿಸಿದೆ ಎಂದು ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.